ವಿಜ್ಞಾನದಿಂದ ಮನುಷ್ಯನ ಜೀವನ ಸರಳ

ಬೀದರ್:ಮಾ.3: ವಿಜ್ಞಾನ ಮನುಷ್ಯನ ಜೀವನ ಸರಳಗೊಳಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಶಾ ಹೇಳಿದರು.

ಇಲ್ಲಿಯ ರಾಮಕೃಷ್ಣ ವಿವೇಕಾನಂದ ಆಶ್ರಮದಲ್ಲಿ ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್, ಕರ್ನಾಟಕ ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನ ಮನುಷ್ಯನ ಜೀವನದ ಭಾಗವೇ ಆಗಿ ಹೋಗಿದೆ. ಪ್ರತಿ ಚಟುವಟಿಕೆಯಲ್ಲೂ ಹಾಸು ಹೊಕ್ಕಿದೆ ಎಂದು ತಿಳಿಸಿದರು.

ವಿಜ್ಞಾನದ ಸತ್ಯವನ್ನು ವಿದ್ಯಾರ್ಥಿಗಳಿಗೆ ಸಮರ್ಥವಾಗಿ ವಿವರಿಸುವ ಹಾಗೂ ಅರ್ಥೈಸುವ ಹೊಣೆಗಾರಿಕೆ ಶಿಕ್ಷಕರ ಮೇಲಿದೆ ಎಂದು ಹೇಳಿದರು.

ಸಾನಿಧ್ಯ ವಹಿಸಿದ್ದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಯೋತಿರ್ಮಯಾನಂದ ಸ್ವಾಮೀಜಿ ಮಾತನಾಡಿ, ಶಿಕ್ಷಕರು ಮಕ್ಕಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸಿದ್ದಲ್ಲಿ ಹೊಸ ಹೊಸ ಸಂಶೋಧನೆಗಳಿಗೆ ಪ್ರೇರಣೆ ದೊರೆಯಲಿದೆ ಎಂದು ತಿಳಿಸಿದರು.

ಆಶ್ರಮದ ಅಭಯಾನಂದ ಸ್ವಾಮೀಜಿ ಮಾತನಾಡಿ, ಸಿ.ವಿ. ರಾಮನ್ ಬೆಳಕಿನ ಚದುರುವಿಕೆ ಕಂಡು ಹಿಡಿದು ವಿಶ್ವದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದರು. ವಿದ್ಯಾರ್ಥಿಗಳಿಗೆ ಅವರಂಥ ವಿಜ್ಞಾನಿಗಳು ಮಾದರಿಯಾಗಬೇಕು ಎಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ. ಮೂಲಿಮನಿ ಮಾತನಾಡಿ, ಶಿಕ್ಷಣ ಯಾವುದೇ ಒಂದಕ್ಕೆ ಸೀಮಿತವಲ್ಲ. ಎಲ್ಲದರ ತಿಳಿವಳಿಕೆ ಹಾಗೂ ಪರಿಪೂರ್ಣ ಜ್ಞಾನ ಪಡೆಯುವುದೇ ಶಿಕ್ಷಣ ಎಂದರು.

ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ಬೆಲ್ದಾರ್ ಮಾತನಾಡಿ, ಮಕ್ಕಳು ವೈಜ್ಞಾನಿಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ವಿಜ್ಞಾನಿಗಳಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.

ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ದಾನಿ ಬಾಬುರಾವ್, ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಕೋಶಾಧ್ಯಕ್ಷ ಸಂಜೀವಕುಮಾರ ಸ್ವಾಮಿ, ಸರ್ಕಾರಿ ಪ್ರೌಢಶಾಲಾ ಬಡ್ತಿ ಮುಖ್ಯಗುರುಗಳ ಸಂಘದ ರಾಜ್ಯ ಖಜಾಂಚಿ ಝಾಕೀರ್ ಹುಸೇನ್, ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಟಾಳೆ ಮಾತನಾಡಿದರು.

ಉತ್ತಮ ವಿಜ್ಞಾನ ಶಿಕ್ಷಕರಿಗೆ ಸಿ.ವಿ. ರಾಮನ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯ ಸರ್ಕಾರಿ ಹಿರಿಯ ಹಾಗೂ ಪದವೀಧರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಕಪಲಾಪುರೆ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಂಗಶೆಟ್ಟಿ ಹಲಬುರ್ಗೆ, ಎಸ್.ಸಿ, ಎಸ್.ಟಿ. ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗೋವಿಂದ ಪೂಜಾರಿ, ಕಲ್ಯಾಣ ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಗೌರವಾಧ್ಯಕ್ಷ ದೇವಿಪ್ರಸಾದ್ ಕಲಾಲ್, ಕಾರ್ಯದರ್ಶಿ ವೀರಭದ್ರಪ್ಪ ಚಟ್ನಳ್ಳಿ, ಬಾಬುರಾವ್ ಮಜ್ಜಿಗೆ, ಮಹಮ್ಮದ್ ಶಾಬುದ್ದೀನ್, ಲಕ್ಷ್ಮಣ ಪೂಜಾರಿ, ಸಿದ್ದರಾಮ ಗಡವಂತೆ, ಸುಭಾಷ್ ಚೌಹಾಣ್, ಪ್ರಕಾಶ ರೆಡ್ಡಿ, ರಾಘವೇಂದ್ರ ಕುಲಕರ್ಣಿ ಇದ್ದರು.