ವಿಜ್ಞಾನದಲ್ಲಿ ಅನಾಹುತವಿಲ್ಲ, ಬಳಕೆಯಲ್ಲಿ ವ್ಯತ್ಯಾಸವಿದೆ

ಭಾಲ್ಕಿ:ಸೆ.7:ವಿಜ್ಞಾನಿಗಳು ಕೈಗೊಳ್ಳುವ ಸಂಶೋಧನೆಯಲ್ಲಿ ಯಾವತ್ತೂ ಅಪಾಯ, ಅನಾಹುತವಿಲ್ಲ. ಆದರೆ, ಅದರ ಬಳಕೆಯ ಉದ್ದೇಶದಲ್ಲಿ ವ್ಯತ್ಯಾಸವಾದಲ್ಲಿ ಮಾತ್ರ ಅನಾಹುತ ತಪ್ಪಿದ್ದಲ್ಲ ಎಂದು ಇಸ್ರೋ ಬಾಹ್ಯಾಕಾಶ ಆಯೋಗದ ಸದಸ್ಯ ಎ.ಎಸ್.ಕಿರಣಕುಮಾರ ಅಭಿಮತ ವ್ಯಕ್ತಪಡಿಸಿದರು.
ತಾಲ್ಲೂಕಿನ ಕರಡ್ಯಾಳದ ಶ್ರೀ ಚನ್ನಬಸವೇಶ್ವರ ಗುರುಕುಲ ವಿಜ್ಞಾನ ಕಾಲೇಜಿನ ಅನುಭವ ಮಂಟಪದಲ್ಲಿ ಹಮ್ಮಿಕೊಂಡಿದ್ದ ಒಳಚರಂಡಿ ಸಂರಕ್ಷಣಾ ಘಟಕದ ಉದ್ಘಾಟನೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಣುಬಾಂಬ್ ಸೇರಿದಂತೆ ವಿಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಎಲ್ಲ ಸಂಶೋಧನೆಗಳ ಮೂಲ ಉದ್ದೇಶ ಅವುಗಳ ಸದ್ಬಳಕೆಯೇ ಆಗಿದೆ. ಮಾನವರು ಸ್ವಾರ್ಥ ಸಾಧನೆಗಾಗಿ ಸಂಶೋಧನೆಗಳನ್ನು ವಿನಾಶಕ್ಕಾಗಿ ಬಳಸಿರುವುದು ಖೇದಕರ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳು ಪ್ರಶ್ನಿಸುವ ಕೌಶಲ ಹಾಗೂ ಸೃಷ್ಟಿಯಲ್ಲಿರುವ ಹೊಸ ವಸ್ತುಗಳನ್ನು ಕುತೂಹಲದಿಂದ ನೋಡುವ ದೃಷ್ಟಿ ಬೆಳೆಸಿಕೊಂಡಲ್ಲಿ ದೊಡ್ಡ ವಿಜ್ಞಾನಿ ಆಗುವುದರಲ್ಲಿ ಸಂದೇಹವಿಲ್ಲ ಎಂದು ಮೇಡಂ ಕ್ಯೂರಿ, ಥಾಮಸ್ ಅಲ್ವಾ ಎಡಿಸನ್ ಸೇರಿದಂತೆ ಇತರ ಸಂಶೋಧಕರ ಉದಾಹರಣೆಯೊಂದಿಗೆ ಮಾರ್ಮಿಕವಾಗಿ ವಿವರಿಸಿದರು.
ಬಾಹ್ಯಾಕಾಶ ಕ್ಷೇತ್ರದ ಬೆಳವಣಿಗೆ ನಮ್ಮ ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುತ್ತಿದೆ. ನಾನಾ ಉಪಗ್ರಹ, ರಾಕೆಟ್, ಸುಧಾರಿತ ವೈಜ್ಞಾನಿಕ ಸಲಕರಣೆಗಳ ಸಂಶೋಧನೆ ಮಾನವರ ಬದುಕನ್ನು ಉತ್ತಮಗೊಳಿಸಿದೆ. ನಾವಿಕ ಉಪಗ್ರಹ ಮೀನುಗಾರರಿಗೆ ಚಂಡಮಾರುತ, ಮಳೆಯ ಮುನ್ಸೂಚನೆ ನೀಡುತ್ತಿರುವುದರಿಂದ ಮೀನುಗಾರರ ಬದುಕು ಸುರಕ್ಷತವಾಗಿದೆ ಎಂದರು.
ಓದಲು, ಬರೆಯಲು ಬಾರದೆ ಇರುವರು ಸಹ ತಂತ್ರಜ್ಞಾನವನ್ನು ಬಳಸಿಕೊಂಡು ಆರ್ಥಿಕವಾಗಿ ಪ್ರಗತಿ ಸಾಧಿಸುವುದರ ಜೊತೆಗೆ ಆಧುನಿಕ, ಸುಖಮಯ ಜೀವನ ಸಾಗಿಸುತ್ತಿದ್ದಾರೆ.
ಗುರುಕುಲ ವಿಜ್ಞಾನ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ರಾಷ್ಟ್ರ, ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿರುವುದರ ಹಿಂದೆ ಡಾ.ಬಸವಲಿಂಗ ಪಟ್ಟದ್ದೇವರ ಅವಿರತ ಶ್ರಮ, ದೂರದೃಷ್ಟಿ, ಮುಂದಾಲೋಚನೆ ಇದೆ ಎಂದು ಬಣ್ಣಿಸಿದರು.
ಅನುಭವ ಮಂಟಪದ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು, ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಗುರುಕುಲ ವಿದ್ಯಾಸಂಸ್ಥೆಯಲ್ಲಿ ನೀರು ದೊರಕಿಸಿ ಕೊಡುವಲ್ಲಿ ವಿಜ್ಞಾನಿ ಎ.ಎಸ್.ಕಿರಣಕುಮಾರ ಸೇರಿದಂತೆ ಎಂಟ್ರಿಕ್ಸ್ ಸಂಸ್ಥೆಯ ವಿಜ್ಞಾನಿಗಳ ಕೊಡುಗೆ ಹಿರಿದಿದೆ ಎಂದು ತಿಳಿಸಿದರು.
ಮಹಾಲಿಂಗ ಸ್ವಾಮೀಜಿ, ಎನ್‍ಆರ್‍ಎಸ್‍ಸಿ ಗ್ರೂಪ್ ಹೆಡ್ ಡಿ.ಶಾಂತನಕುಮಾರ, ಪ್ರಮುಖ ಅಧಿಕಾರಿಗಳಾದ ಈಶ್ವರಚಂದ್ರ, ದೇವಸುಧಾಕರ ಪಾಟೀಲ, ನಿರ್ದೇಶಕರಾದ ಬಸವರಾಜ ಧನ್ನೂರ, ಚನ್ನಬಸವ ಬಳತೆ, ಶಶಿಧರ ಕೋಸಂಬೆ ಸೇರಿದಂತೆ ಇತರರು ಇದ್ದರು.
ಆಡಳಿತಾಧಿಕಾರಿ ಮೋಹನರೆಡ್ಡಿ ಸ್ವಾಗತಿಸಿದರು. ಪ್ರಾಚಾರ್ಯ ಬಸವರಾಜ ಮೊಳಕೀರೆ ಪ್ರಾಸ್ತಾವಿಕ ಮಾತನಾಡಿದರು.
ಲಕ್ಷ್ಮಣ ಮೇತ್ರೆ ನಿರೂಪಿಸಿ, ವಂದಿಸಿದರು.