ವಿಜ್ಞಾನಕ್ಕೆ ಪೂರಕವಾಗಿರಲಿ ನಮ್ಮ ಪ್ರಯತ್ನ

ಪುತ್ತೂರು, ಜೂ.೯- ವಿಜ್ಞಾನ ಎನ್ನುವುದು ವಿಶೇಷವಾದ ಜ್ಞಾನ. ವಿಜ್ಞಾನವು ಜನರಿಗಾಗಿ ಹಾಗೂ ಜನರ ಚಿಂತನೆಗಳು ವಿಜ್ಞಾನಕ್ಕೆ ಪೂರಕವಾಗಿರುವ ರೀತಿಯಲ್ಲಿ ನಮ್ಮ ಪ್ರಯತ್ನ ಸಾಗಲಿ ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಹಾಗೂ ವಿವೇಕಾನಂದ ಪದವಿ ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಶ್ರೀಶ ಭಟ್ ಹೇಳಿದರು.
ಅವರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಆನ್ ಲೈನ್ ವೇದಿಕೆಯ ಮೂಲಕ ನಡೆದ ‘ಮೂಲ ವಿಜ್ಞಾನದಲ್ಲಿರುವ ಅವಕಾಶ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ವಿಜ್ಞಾನವನ್ನು ಜನಪ್ರಿಯಗೊಳಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ. ವಿಜ್ಞಾನ ಎಂಬುದು ಸಾರ್ವತ್ರಿಕವಾಗಿದ್ದು ಜಗತ್ತಿನ ಎಲ್ಲಾ ಮೂಲೆಯಲ್ಲೂ ವಿಜ್ಞಾನಕ್ಕೆ ವಿಶೇಷ ಸ್ಥಾನವಿದೆ. ವಿಜ್ಞಾನದ ವಿದ್ಯಾರ್ಥಿಗಳು ಪ್ರಯೋಗಾಲಯದಲ್ಲಿ ಮಾತ್ರ ಕೌಶಲ್ಯಭರಿತರಾಗಿರದೆ ಎಲ್ಲಾ ರಂಗಗಳಲ್ಲಿಯೂ ನಿಸ್ಸೀಮರಾಗಿದ್ದಾರೆ. ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ಹಂತದಲ್ಲಿ ವಿಜ್ಞಾನ ಕಲಿಕೆಗಿಂತ ಸಂಶೋಧನೆ ಮಾಡುವಾಗ ಸ್ವಶಕ್ತಿ, ಸಾಮಥ್ರ್ಯದ ಕಡೆಗೆ ನಂಬಿಕೆಯಿರಬೇಕು. ಈ ಮೂಲಕ ಯುವಜನರಲ್ಲಿ ಸಂಶೋಧನೆಯ ಪ್ರವೃತ್ತಿ ಬೆಳೆದು ಬರಬೇಕು ಎಂದ ಅವರು ಪಿಯುಸಿ ಶಿಕ್ಷಣದ ಬಳಿಕ ಲಭ್ಯವಿರುವ ವಿವಿಧ ಕೋರ್ಸ್‌ಗಳ ಬಗ್ಗೆ ಮಾಹಿತಿ ನೀಡಿದರು.
ಕಾಲೇಜಿನ ಪ್ರಾಚಾರ್ಯ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ಉಪನ್ಯಾಸಕರಾದ ಸುಧೀರ್ ಎ.ಎಸ್ ಮತ್ತು ಗಣೇಶ್‌ಉಮೇಶ್ ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.