ವಿಜ್ಞಾನಕ್ಕೆ ನರಸಿಂಹಯ್ಯ ಕೊಡುಗೆ ಅಪಾರ

ಕೋಲಾರ ಜೂ,೮- ವೈಜ್ಞಾನಿಕ ಯುಗದಲ್ಲಿ ಆಧುನಿಕತೆಯತ್ತ ಸಾಗುತ್ತಿರುವ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೆಳಸಿಕೊಂಡು ಹೇಗೆ..? ಏಕೆ..? ಏನು..? ಎಂಬ ಪ್ರಶ್ನೆಗಳ ಚಿಂತನ-ಮಂಥನ ಮಾಡುವುದರ ಮೂಲಕ ನರಸಿಂಹಯ್ಯನವರ ಸಾಧನೆ ಕಾರ್ಯಗಳನ್ನು ಶಾಶ್ವತಗೊಳಿಸಲು ಪ್ರಯತ್ನಿಸಬೇಕು. ಈ ದಿಸೆಯಲ್ಲಿ ಅವರ ದೂರದೃಷ್ಟಿ ಇಂದಿನ ಸಮಾಜಕ್ಕೆ ಮಾದರಿಯಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಜಿ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಶಂಕರ ವಿದ್ಯಾಲಯದಲ್ಲಿ ಇಂದು ಜ್ಞಾನ ವಿಜ್ಞಾನ ಸಮಿತಿ ಏರ್ಪಡಿಸಿದ್ದ ನರಸಿಂಹಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕ ಮುಜಾಹಿದ್ ಪಾಷಾ ರವರಿಗೆ ಹೆಚ್.ನರಸಿಂಹಯ್ಯ ಪ್ರಶಸ್ತಿ ನೀಡಿ ಮಾತನಾಡಿದರು.
ಇಂದಿನ ಆಧುನಿಕ ಯುಗದಲ್ಲಿ ಕಲೆ, ವಿಜ್ಞಾನ, ವಾಣಿಜ್ಯ ಕೋರ್ಸ್‌ಗಳ ಜೊತೆಗೆ ಮೆಡಿಕಲ್, ಇಂಟರನೆಟ್, ಎಲೆಕ್ರ್ಟಾನಿಕ್ ಕೋರ್ಸ್‌ಗಳು ಆರಂಭವಾಗಿದ್ದು, ಕಲಾಕ್ಷೇತ್ರ, ಶಿಕ್ಷಣಕ್ಷೇತ್ರ ಮತ್ತಷ್ಟು ಸಮಾಜದ ಪ್ರಗತಿಗೆ ಆದರ್ಶವಾಗಲು ಇಂದಿನ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ತಂತ್ರಜ್ಞಾನ ಶಿಕ್ಷಣದ ಅರಿವು ಹೊಂದಿರಬೇಕು ಎಂದರು.
ಜಿಲ್ಲಾ ಕಾರ್ಯದರ್ಶಿ ಶರಣಪ್ಪ ಜಮಾದಾರ್ ರವರು ಮಾತನಾಡಿ ನ್ಯಾಷನಲ್ ಕಾಲೇಜು ಆರಂಭಿಸಿ ವಿದ್ಯಾಭ್ಯಾಸಕ್ಕೆ ಮಹತ್ವದ ಕೊಡುಗೆ ನೀಡಿದ್ದ ಅವರ ಜೀವನದ ಹಾದಿ ಇಂದಿನ ಸಮಾಜ ಎಲ್ಲರಿಗೂ ಸ್ಫೂರ್ಥಿಯಾಗಿದೆ ಎಂದರು.
ಜಿಲ್ಲಾ ಸಂಚಾಲಕ ಡಿ.ಎನ್ ಮುಕುಂದ ಮಾತನಾಡಿ ವೈಜ್ಞಾನಿಕತೆ ಇಂದು ಅವಶ್ಯವಾಗಿದ್ದು, ಗ್ರಹಣಕಾಲದಲ್ಲೂ ಬಾಳೆಹಣ್ಣು ತಿಂದರೆ ಏನೋ ಆಗುತ್ತೆ ಮೂಡನಂಬಿಕೆಯ ಸರಳ ವಿಚಾರಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಪ್ರಾಮಾಣಿಕ ಪ್ರಯತ್ನದಲ್ಲಿ ವಿದ್ಯಾರ್ಥಿಗಳಿಗೆ ನರಸಿಂಹಯ್ಯ ಆದರ್ಶಗಳ ಬೋಧನೆಯಾಗಬೇಕಂದರು.
ಸಮಾರಂಭದಲ್ಲಿ ಜ್ಞಾನ ವಿಜ್ಞಾನ ಸಮಿತಿಯ ಮುಖಂಡರುಗಳಾದ ಎಸ್.ಸುರೇಶ್ ಕುಮಾರ್, ಕೆ.ವಿ ಜಗನ್ನಾಥ, ಮೋಹನಾಚಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.