ವಿಜ್ಞಾನಕ್ಕೆ ಅತ್ಯಂತ ಸಮೀಪವಾದದ್ದು ಲಿಂಗಾಯತ ಧರ್ಮ : ಶ್ರೀಕಾಂತ ಸ್ವಾಮಿ

ಬೀದರ: ಆ.31:ವಿಜ್ಞಾನಕ್ಕೆ ಅತ್ಯಂತ ಸಮೀಪವಾದ ಧರ್ಮವೇ ಲಿಂಗಾಯತ ಧರ್ಮ. ಶರಣರ ವಚನಗಳಲ್ಲಿ ಬದುಕುವ ದಾರಿಯಿದೆ. ಸಂಸ್ಕøತಿ ಸಂಸ್ಕಾರವಿದೆ. ಅವುಗಳನ್ನು ಪ್ರತಿನಿತ್ಯ ಪಠಿಸಿ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ರಾಜ್ಯ ಸಂಚಾಲಕ ಶ್ರೀಕಾಂತ ಸ್ವಾಮಿ ತಿಳಿಸಿದರು.

ನಗರದ ಹಾರೂರಗೇರಿಯಲ್ಲಿ ಜಿಲ್ಲಾ ರಾಷ್ಟ್ರೀಯ ಬಸವ ದಳದ ವತಿಯಿಂದ ಹಮ್ಮಿಕೊಂಡ ವಿಶ್ವಧರ್ಮ ಪ್ರವಚನದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸ್ವರ್ಗ ನರಕಗಳು ಬೇರೆ ಎಲ್ಲೂ ಇಲ್ಲ. ಉತ್ತಮ ಕೆಲಸಗಳನ್ನು ಮಾಡಿದರೆ ಅದೇ ಸ್ವರ್ಗ. ಕೆಟ್ಟ ಕಾರ್ಯ ಮಾಡದರೆ ಅದೇ ನರಕ. ನಮ್ಮ ಆತ್ಮಸಾಕ್ಷಿಯೇ ಎಣ್ಣೆ ಇದ್ದಂತೆ. ನಾವು ಯಾರಿಗೂ ಗೊತ್ತಾಗದ ಹಾಗೆ ತಪ್ಪು ಮಾಡಿದರೆ ಬಿಸಿ ಎಣ್ಣೆಯಂತೆ ಆತ್ಮಸಾಕ್ಷಿ ನಮ್ಮನ್ನು ಸುಡುತ್ತದೆ. ಅದೇ ದೇವರು ನಮಗೆ ಕೊಡುವ ಶಿಕ್ಷೆಯಾಗಿದೆ. ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ತಮ್ಮ ಮನಸ್ಸುಗಳನ್ನು ಶುದ್ಧವಾಗಿಟ್ಟುಕೊಂಡು ದೇವರ ಧ್ಯಾನ ಪೂಜೆಯಲ್ಲಿ ನಿರತರಾಗಬೇಕೆಂದು ಸ್ವಾಮಿ ತಿಳಿಸಿದರು.

ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಮಾತೆ ಸತ್ಯಾದೇವಿ ಮಾತನಾಡಿ ಒಂದು ಮನೆ ಶುದ್ಧವಾಗಿದೆ ಎಂದು ಅದರ ಅಂಗಳವೇ ಹೇಳುವಂತೆ, ವ್ಯಕ್ತಿ ಪರಿಶುದ್ಧವಾಗಿರುವ ಕುರಿತು ಆತನ ಗುಣಗಳೇ ನಮಗೆ ತಿಳಿಸಿಕೊಡುತ್ತವೆ. ಮನಸ್ಸಿನಲ್ಲಿರುವ ಕಲ್ಮಶಗಳನ್ನು ಹೊರಹಾಕಿ, ಪರಧನ ಪರಸತಿ ಪರದೈವಂಗಳನ್ನು ಬಯಸದೆ ದೇವರ ಕೃಪೆಗೆ ಪಾತ್ರರಾಗಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಖ್ಯಾತ ಅಭಿಯಂತರರಾದ ಹಾವಶೆಟ್ಟಿ ಪಾಟೀಲ, ಶಿವಶರಣಪ್ಪ ಪಾಟೀಲ ಹಾರೂರಗೇರಿ, ಶಿವರಾಜ ಪಾಟೀಲ ಅತಿವಾಳ, ರವಿಕಾಂತ ಬಿರಾದಾರ, ಓಂಪ್ರಕಾಶ ರೊಟ್ಟೆ, ಬಸವಂತರಾವ ಬಿರಾದಾರ, ಗಣಪತಿ ಬಿರಾದಾರ, ಮಲ್ಲಿಕಾರ್ಜುನ ಶಾಪುರೆ, ಕಲ್ಯಾಣರಾವ ಬಂಬುಳಗಿ, ವಿಶ್ವನಾಥ ಪಾಟೀಲ ಗೊಂದೆಗಾಂವ, ಸತೀಶ ಪಾಟೀಲ, ಶ್ರೀನಾಥ ಕೋರೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸಂಜೀವಕುಮಾರ ಬುಕ್ಕಾ ಸ್ವಾಗತಿಸಿದರು. ಮಹಾರುದ್ರ ಡಾಕುಳಗೆ ನಿರೂಪಿಸಿದರು. ಪ್ರಸಾದ ದಾಸೋಹಿಗಳಾದ ಸರಸ್ವತಿ ಶೆಟಕಾರ ವಂದಿಸಿದರು.