ವಿಜ್ಞಾನಕ್ಕೂ ಆಧ್ಯಾತ್ಮಕ್ಕೂ ಸಂಪರ್ಕ ಸೇತುವೆ ಕಟ್ಟುವ ಅವಶ್ಯಕತೆ ಇದೆ:ಡಾ. ಶ್ರೀನಿವಾಸ ಸಿರನೂರಕರ್

ಕಲಬುರಗಿ,ಆ.1: ನಗರದ ಸರ್ವಜ್ಞ ಮತ್ತು ಜಸ್ಟಿಸ್ ಶಿವರಾಜ ಪಾಟೀಲ ಪದವಿ ಪೂರ್ವ ಕಾಲೇಜಿನಲ್ಲಿ ‘ಆಜಾದಿ ಕಾ ಅಮೃತ ಮಹೋತ್ಸವ’ ಮತ್ತು ‘ಶ್ರಾವಣ ಮಾಸದ’ ನಿಮಿತ್ಯ ಯುವ ವಿದ್ಯಾರ್ಥಿಗಳಿಗೆ “ವಿಜ್ಞಾನ ಮತ್ತು ಆಧ್ಯಾತ್ಮಿಕತೆ” ಎಂಬ “ವ್ಯಕ್ತಿತ್ವ ವಿಕಸನದ ವಿಶೇಷ ಕಾರ್ಯಕ್ರಮವನ್ನು” ಸಾಹಿತಿ ಮತ್ತು ಹಿರಿಯ ಪತ್ರಕರ್ತರಾದ ಡಾ. ಶ್ರೀನಿವಾಸ ಸಿರನೂರಕರ್ ಅವರು ಉದ್ಘಾಟಿಸಿ ಮಾತನಾಡುತ್ತ, ವಿಜ್ಞಾನ ಮತ್ತು ಆಧ್ಯಾತ್ಮ ಪರಸ್ಪರ ಪೂರಕ ಮತ್ತು ಪ್ರೇರಕ ಆಗಬೇಕಾದದ್ದು, ಪರಸ್ಪರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿವೆ ಆದ್ದರಿಂದ ವಿಜ್ಞಾನಕ್ಕೂ ಆಧ್ಯಾತ್ಮಕ್ಕೂ ಸಂಪರ್ಕ ಸೇತುವೆ ಕಟ್ಟುವ ಅವಶ್ಯಕತೆ ಇದೆ ಎಂದರು.

ಆಧ್ಯಾತ್ಮವೆಂಬುದು ಕೇವಲ ಭಸ್ಮ, ನಾಮ ಹಚ್ಚುವುದಲ್ಲ, ಪರತತ್ವವನ್ನು ಅರಿತುಕೊಂಡು ತನ್ನನ್ನು ಅದರಲ್ಲಿ ತೊಡಗಿಸಿಕೊಳ್ಳುವುದು ಎಂದರು. ಭಾರತದಲ್ಲಿ ಆಧ್ಯಾತ್ಮದ ಪರಂಪರೆ ಇದೆ. ಇದಕ್ಕೂ ವಿಜ್ಞಾನಕ್ಕೂ ಸಂಪರ್ಕ ಸೇತುವೆ ಕಟ್ಟುವ ಅವಶ್ಯಕತೆ ಇದೆ ಎಂದರು. 
ಯುವ ವಿದ್ಯಾರ್ಥಿಗಳು ವಚನ, ಪುರಾಣ, ಪ್ರವಚನ ಕೇಳುವುದನ್ನು ರೂಢಿ ಮಾಡಿಕೊಂಡಾಗ ಅದು ಜ್ಞಾನದ ವಿಕಸನಕ್ಕೆ ನಾಂದಿಯಾಗುತ್ತದೆ ಎಂದರು. ವಿಜ್ಞಾನ ಪಂಚೇಂದ್ರಿಯಗಳಿಗೆ ನಿಲುಕುವಂತದ್ದು, ಆದರೆ ಆಧ್ಯಾತ್ಮ ಇವುಗಳನ್ನು ಮೀರಿದ ಬೆಳವಣಿಗೆ. ಆಧ್ಯಾತ್ಮದ ನಿಲುವು ಬಹುದೊಡ್ಡದಾದರೂ ಸಾಧಕರಿಗೆ ಮಾತ್ರ ಅದು ಸಾಧ್ಯ ಎಂದರಲ್ಲದೇ ನಿಸರ್ಗದ ಜೊತೆಗೆ ಬದುಕುವವರಿಗೆ ಆಧ್ಯಾತ್ಮದ ಅರಿವು ಬಹುಬೇಗ ಎಂದರು. ಯುವಕರಿದ್ದಾಗಲೇ ಆಧ್ಯಾತ್ಮದ ಅಭಿರುಚಿ ಇದ್ದರೆ ಅತ್ಯುನ್ನತ ಮಟ್ಟಕ್ಕೆ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬಹುದು ಎಂದರು.  
            ಶ್ರಾವಣ ಮಾಸದ ನಿಮಿತ್ಯ ವಿದ್ಯಾರ್ಥಿಗಳಿಗೆ ವಚನ-ದಾಸವಾಣಿಯ ಜೊತೆಗೆ ಕುಂಚಗಾಯನ ಸಂಗೀತ ಕಾರ್ಯಕ್ರಮವನ್ನು ಸಗರ ನಾಡಿನ ಬಹುಮುಖ ಕಲಾವಿದರಾದಂತಹ ಕೆಂಭಾವಿಯ ಶ್ರೀ ಹಳ್ಳೇರಾವ ಕುಲಕರ್ಣಿ ಮತ್ತು ಆಕಾಶವಾಣಿ ಸಂಗೀತ ಕಲಾವಿದರಾದ ಶ್ರೀ ಬಸವರಾಜ ಬಂಟನೂರ ರವರ ಹಾಡುಗಳು ವಿದ್ಯಾರ್ಥಿಗಳ ಮನಸೆಳೆಯಿತು. ಪಂಡಿತ್ ಬಂಟನೂರ ರವರು ಹಾಡುವಾಗಲೇ ನೇರವಾಗಿ ಹಳ್ಳೇರಾವ ಕುಲಕರ್ಣಿ ಅವರ ಕುಂಚದಿಂದ ಮೂಡಿದ ಚಿತ್ರಕಲೆಯನ್ನು ನೋಡಿ ವಿದ್ಯಾರ್ಥಿಗಳು, ಶಿಕ್ಷಕರು ಅತ್ಯಂತ ಮೆಚ್ಚುಗೆ ವ್ಯಕ್ತಪಡಿಸಿದರು.
    ಕಾಲೇಜಿನ ಸಂಸ್ಥಾಪಕರಾದ ಪ್ರೊ. ಚನ್ನಾರಡ್ಡಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲರಾದ ಶ್ರೀ ಎಂ.ಸಿ.ಕಿರೇದಳ್ಳಿ, ಶ್ರೀಮತಿ ವಿನುತಾ ಆರ್.ಬಿ., ಶ್ರೀ ಪ್ರಭುಗೌಡ ಸಿದ್ಧರೆಡ್ಡಿ, ಶ್ರೀ ಕರುಣೇಶ್ ಹಿರೇಮಠ ಮತ್ತು ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶ್ರೀ ಗುರುರಾಜ ಕುಲಕರ್ಣಿ ಕಾರ್ಯಕ್ರಮವನ್ನು ನಿರೂಪಿಸಿದರು. ಸರ್ವಜ್ಞ ಚಿಣ್ಣರ ಲೋಕದ ತಬಲಾ ಕಲಾವಿದರಾದ ಪಂಚಾಕ್ಷರಿ ಕಣವಿ ತಬಲಾ ಸಾಥ್ ನೀಡಿದರು. ಕು. ಶರಣಮ್ಮ ಮತ್ತು ಭವಾನಿ ಪ್ರಾರ್ಥನೆ ಗೀತೆ ಹಾಡಿದರು.