ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ

ಕೆಂಭಾವಿ:ಸೆ.20:ಇತ್ತಿಚಿನ ದಿನಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕ್ರಿಕೆಟ್ ಅಲ್ಲದೆ ಬೇರೆ ಕ್ರೀಡೆಗಳಲ್ಲೂ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ ಎನ್ನುವದಕ್ಕೆ ಈಚೆಗೆ ಮುಕ್ತಾಯವಾದ ಓಲಂಪಿಕ್ಸ್ ಹಾಗೂ ಪ್ಯಾರಾ ಓಲಂಪಿಕ್ಸ್‍ನಲ್ಲಿ ಪಡೆದ ಪದಕಗಳೆ ಸಾಕ್ಷಿ ಎಂದು ಶಿಕ್ಷಕ ಬಂದೇನವಾಜ ನಾಲತವಾಡ ಹೇಳಿದರು.

ಪಟ್ಟಣದ ಹಿಲ್‍ಟಾಪ್ ಕಾಲೋನಿ ಕ್ರೀಡಾಂಗಣದಲ್ಲಿ ನಡೆದ ಕೆಪಿಎಲ್ ಕ್ರಿಕೆಟ್ ಟೂರ್ನಾಮೆಂಟ್‍ನ ಫೈನಲ್ ಪಂದ್ಯದಲ್ಲಿ ವಿಜೇತ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಯುವಕರು ಕ್ರೀಡೆಯಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವದರಿಂದ ದೈಹಿಕ ಕ್ಷಮತೆ ಜತೆಯಲ್ಲಿ ಮಾನಸಿಕ ಕ್ಷಮತೆಯು ಹೆಚ್ಚುತ್ತದೆ. ಈಚೆಗೆ ಮುಗಿದ ಓಲಂಪಿಕ್ಸ್‍ನಲ್ಲಿ ಭಾರತೀಯರು ಹೆಚ್ಚು ಪದಕಗಳನ್ನು ವಿಜೇತರಾದ ಮೇಲೆ ಭಾರತೀಯರು ಕ್ರೀಡೆಯನ್ನು ನೋಡುವ ರೀತಿ ಬದಲಾಗಿದೆ. ಹೆಚ್ಚಿನ ಜನರು ಕ್ರೀಡೆಯ ಕಡೆಗೆ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದರು.

ಸಮಾರೋಪ ಸಮಾರಂಭದಲ್ಲಿ ಬಿಜೆಪಿ ಯುವ ಮುಖಂಡ ಶ್ರೀನಿವಾಸರೆಡ್ಡಿ ಯಾಳಗಿ, ಕೃಷ್ಣರೆಡ್ಡಿ ಮುದನೂರ, ಸಂಗಣ್ಣ ತುಂಬಗಿ, ಡಿ.ಸಿ.ಪಾಟೀಲ, ಉಮೇಶರೆಡ್ಡಿ, ನಂದಪ್ಪ ಕವಾಲ್ದಾರ, ಆನಂದ ಸೊನ್ನದ, ಮಂಜು, ತುಳಜಾರಾಮ, ಜಾವೇದ, ವಾಹಿದ್ ಸೇರಿದಂತೆ ಇತರರಿದ್ದರು.

ಭಾನುವಾರ ರೋಚಕವಾಗಿ ನಡೆದ ಫೈನಲ್ ಪಂದ್ಯದಲ್ಲಿ ಲಕ್ಕಿ ಲಯನ್ಸ್ ತಂಡ ಆರ್‍ಸಿಸಿ ತಂಡವನ್ನು ಸೂಪರ್ ಓವರನಲ್ಲಿ 13 ರನ್‍ಗಳಿಂದ ಸೋಲಿಸಿ ಕಪ್‍ನ್ನು ತನ್ನ ಮುಡಿಗೇರಿಸಿಕೊಂಡಿತು. ಪ್ರಥಮ ಬಹುಮಾನ ಐವತ್ತೊಂದು ಸಾವಿರ ಹಾಗೂ ಒಂದು ಕಪ್‍ನ್ನು ಯುವ ಮುಖಂಡ ಅಮೀನರೆಡ್ಡಿ ಯಾಳಗಿ ಹಾಗೂ ದ್ವಿತೀಯ ಬಹುಮಾನ ಇಪ್ಪತ್ತೈದು ಸಾವಿರ ಹಾಗೂ ಒಂದು ಕಪ್‍ನ್ನು ಕೃಷ್ಣರೆಡ್ಡಿ ಮುದನೂರ ನೀಡಿದರು. ಗಿರಿರಾಜ ಶಹಾಪುರ ನಿರೂಪಿಸಿದರು. ರಾಘು ಕವಾಲ್ದಾರ ಸ್ವಾಗತಿಸಿದರು. ಶಿವು ಮಲ್ಲಿಬಾವಿ ವಂದಿಸಿದರು.