
ಮುಂಡಗೋಡ,ಮಾ25: ತಾಲೂಕಿನ ಚವಡಳ್ಳಿ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಮಂಗಳವಾರ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅತಿ ವಿಜೃಂಬಣೆಯಿಂದ ನಡೆಯಿತು.
ತಾಲೂಕಿನ ಚವಡಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಬೃಹತ್ ಗಾತ್ರದ ಆಲದ ಮರದಡಿಯಲ್ಲಿರುವ ಮೈಲಾರಲಿಂಗೇಶ್ವರ ಜಾತ್ರೆಯನ್ನು ಈ ಭಾರಿಯೂ ಚವಡಳ್ಳಿ ಹಾಗೂ ಕ್ಯಾಸನಕೇರಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ ಅದ್ದೂರಿಯಾಗಿ ನಡೆಸಿದರು.
ಬೆಳಗ್ಗೆ ದೇವಸ್ಥಾನದಿಂದ ಮೈಲಾರಲಿಂಗೇಶ್ವರ ದೇವರ ಮೂರ್ತಿ ಪಲ್ಲಕ್ಕಿ ಉತ್ಸವ ಹೊರಟು ಗ್ರಾಮದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿತು. ಡೊಳ್ಳು ಮಜಲು ಕುಣಿತದೊಂದಿಗೆ ಸಾಗಿದ ಮೆರವಣಿಗೆಯುದ್ದಕ್ಕೂ ನೆರೆದ ಸಹಸ್ರ ಸಹಸ್ರ ಸಂಖ್ಯೆ ಭಕ್ತರಿಂದ ಚಾಂಗ್ ಮೆಲೊ ಎಂಬ ಘೋಷಣೆ ಮೊಳಗಿತು.
ಕಾರಣಿಕೊತ್ಸವ: ಮಧ್ಯಾಹ್ನ ಚವಡಳ್ಳಿ ಗ್ರಾಮದದಲ್ಲಿ ಕಾರಣಿಕೋತ್ಸವ ನಡೆಯಿತು. ಗೊರವಪ್ಪ ವಿಶ್ವೇಶ್ವರ ಮಡ್ಲಿ ಬಿಲ್ಲನ್ನು ಏರಿ “ಮುತ್ತಿನ ರಾಶಿ ಮೂರಾಯಿತಲೇ ಪರಾಕ್” ಎಂದು ಕಾರಣಿಕ ಹೇಳಿದರು.
ಸರಪಳಿ ಪವಾಡ: ನಂತರ ದೇವಸ್ಥಾನದ ಎದುರಿನ ದೇವರ ಮೂರ್ತಿಯೊಂದಕ್ಕೆ ಕಬ್ಬಿಣದ ಸರಪಳಿಗಳನ್ನು ಕಟ್ಟಿ ತುಂಡರಿಸಲಾಯಿತು. ಶಸ್ತ್ರ ಪವಾಡ, ಶಿವದಾರ ಪವಾಡಗಳು ಜರುಗಿದವು ಹಾಗೂ ತುಲಾಭಾರ ಸೇವೆಗಳು ನಡೆದವು. ಬಳಿಕ ಅನ್ನ ಸಂತರ್ಪಣೆ ನಡೆಯಿತು.
ತಾಲೂಕಿನ ಸುತ್ತಮುತ್ತ ಪ್ರದೇಶಗಳಿಂದ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು.