
ವಿಜಯಪುರ, ಮಾ ೯- ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಧರ್ಮರಾಯಸ್ವಾಮಿ ದ್ರೌಪತಮ್ಮ ದೇವಾಲಯದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಹೋಳಿ ಹುಣ್ಣಿಮೆಯಂದು ಅದ್ದೂರಿ ೮೪ ನೇ ವರ್ಷದ ಹೂವಿನ ಕರಗ ಮಹೋತ್ಸವವು ಸಹಸ್ರಾರು ಭಕ್ತಾಧಿಗಳ ಜಯ ಘೋಷ ಹಾಗೂ ಗೋವಿಂದ ನಾಮ ಸ್ಮರಣೆಯೊಂದಿಗೆ ಮಂಗಳವಾರದಂದು ವಿಜೃಂಭಣೆಯಿಂದ ನಡೆಯಿತು.
ಆ ಪ್ರಯುಕ್ತ ಶ್ರೀ ಧರ್ಮರಾಯಸ್ವಾಮಿ ವಹ್ನಿಕುಲ (ತಿಗಳರ) ಟ್ರಸ್ಟ್ ವತಿಯಿಂದ ಪುಣ್ಯಾಹ, ಧ್ವಜಾರೋಹಣ ಕಾರ್ಯಕ್ರಮಗಳು ಜರುಗಿದ್ದು, ಅರ್ಜುನ ದ್ರೌಪತಮ್ಮ ಅವರಿಗೆ ಕಲ್ಯಾಣೋತ್ಸವ, ಅನ್ನಸಂತರ್ಪಣೆ ನಡೆಯಿತು.
ಸೋಮವಾರದಂದು ರಾತ್ರಿ ದೀಪಾರತಿ ಮತ್ತು ಅಗ್ನಿಕುಂಡ ಪ್ರವೇಶ ನಡೆದಿದ್ದು, ಮಂಗಳವಾರ ರಾತ್ರಿ ೧೧ ಗಂಟೆಗೆ, ಭೀಮಣ್ಣ ಪೂಜಾರಿರವರು ಹೂವಿನಕರಗವನ್ನು ಹೊತ್ತು, ಪಟ್ಟಣದ ಎಲ್ಲಾ ೨೩ ವಾರ್ಡ್‌ಗಳಲ್ಲೂ ಸಂಚರಿಸಿ, ಬೆಳಗ್ಗೆ ೧೨ ಗಂಟೆಗೆ, ದೇವಾಲಯವನ್ನು ಸೇರಿದರು.
ದ್ರೌಪತಮ್ಮ ಧರ್ಮರಾಯಸ್ವಾಮಿ ಹಾಗೂ ಪರಿವಾರ ದೇವರುಗಳ ಮುತ್ತಿನ ಹಾಗೂ ವಿವಿಧ ಬಗೆಯ ಅಲಂಕಾರದ ಪಲ್ಲಕ್ಕಿ ಉತ್ಸವು, ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಯಿತು.
ದೇವಾಲಯದ ಬಳಿ, ಜಾನಪದ ಕಲಾವಿದರ ಬಳಗದಿಂದ ತಮಟೆ ವಾದ್ಯ, ಬ್ಯಾಂಡ್‌ಸೆಟ್, ಕೀಲುಕುದುರೆ, ಗಾರುಡಿವೇಷ, ನವಿಲುಕುಣಿತ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಮಾ ೮ ರಂದು ಮಹಾಭಾರತ ಓದುವುದು, ಗಾವು ಹಿಡಿಯುವುದು, ಮಾ ೯ ರಂದು ಒನಕೆ ಕರಗ ಹೊರುವುದು, ವಸಂತೋತ್ಸವ, ಧ್ವಜಾರೋಹಣ, ಮಹಾಮಂಗಳಾರತಿ, ಪ್ರಸಾಧ ವಿನಿಯೋಗವನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ೧೩ ವರ್ಷಗಳಂತೆ ಈ ಬಾರಿಯೂ ಪೂಜಾರಿ ಭೀಮಣ್ಣರವರು ಕರಗವನ್ನು ಹೊತ್ತಿದ್ದರು.