ವಿಜೃಂಭಣೆಯಿಂದ ಜರುಗಿದ ಸಿಡಿಲು ಮಲ್ಲಿಕಾರ್ಜುನ ಬ್ರಹ್ಮರಥೋತ್ಸವ

ಸಂಜೆವಾಣಿ ವಾರ್ತೆ
ಪ್ರಿಯಾಪಟ್ಟಣ ಬೆಟ್ಟದಪುರ: ಫೆ.25:- ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀಭ್ರಮರಾಂಭ ಸಮೇತ ಸಿಡಿಲು ಮಲ್ಲಿಕಾರ್ಜುನ ಸ್ವಾಮಿ ಬ್ರಹ್ಮರಥೋತ್ಸವ ಸಹಸ್ರಾರು ಭಕ್ತಾಧಿಗಳ ನಡುವೆ ಸಂಭ್ರಮದಿಂದ ಶನಿವಾರ ಜರುಗಿತು.
ಗ್ರಾಮದ ಹೃದಯ ಭಾಗದಲ್ಲಿರುವ ಸಿಡಿಲು ಮಲ್ಲಿಕಾರ್ಜುನ ದೇವಾಲಯದಲ್ಲಿ ಮುಂಜಾನೆಯಿಂದಲೇ ರುದ್ರಾಭೀಷೇಕ, ಮಹಾಮಂಗಳಾರತಿ ಸೇರಿದಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ನಂತರ ಬೆಳ್ಳಿಬಸವ, ವಿಘ್ನೇಶ್ವರ ಹಾಗೂ ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ಉತ್ಸವ ಮೂರ್ತಿಗಳನ್ನು ಪೇಟೆಬೀದಿಯಲ್ಲಿ ಮೆರವಣಿಗೆ ಮಾಡಿ ರಥದ ಬಳಿಗೆ ಕೊಂಡೊಯ್ಯಲಾಯಿತು. ಬೆಳಿಗ್ಗೆ 10.45 ರಿಂದ 11. 15 ರ ವರೆಗಿನ ಶುಭ ಮೇಷ ಲಗ್ನದಲ್ಲಿ ಮೂರು ಪ್ರತ್ಯೇಕ ರಥಗಳಲ್ಲಿ ಉತ್ಸವ ಮೂರ್ತಿಗಳನ್ನು ಪ್ರತಿಷ್ಟಾಪಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಮೈಸೂರು ಸೇರಿದಂತೆ ನೆರೆಯ ಜಿಲ್ಲೆಗಳಿಂದಲು ಆಗಮಿಸಿದ್ದ ಸಾವಿರಾರು ಭಕ್ತರು ಉಘೇ ಮಲ್ಲಯ್ಯ, ಉಘೇ ಗಿರಿಜಮ್ಮ ಎಂಬ ಹರ್ಷೋದ್ಭಾರಗಳೊಂದಿಗೆ ರಥಗಳನ್ನು ಎಳೆದು ಪುನೀತರಾದರು. ನವದಂಪತಿಗಳು ಹಣ್ಣು-ದವನ ಎಸೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಜಾತ್ರೆಯ ಹಿನ್ನೆಲೆ: ಬೆಟ್ಟದಪುರದಲ್ಲಿ ಪ್ರತಿವರ್ಷವೂ ಫೆಬ್ರವರಿ ಮಾಹೆಯಲ್ಲಿ ಬರುವ ಭಾರತ ಹುಣ್ಣಿಮೆಯ ಆಶ್ಲೇಷ ನಕ್ಷತ್ರದಂದು ಭ್ರಮರಾಂಭ ಹಾಗೂ ಮಲ್ಲಿಕಾರ್ಜುನ ಸ್ವಾಮಿಗೆ ಕಲ್ಯಾಣೋತ್ಸವ ನಡೆಸಿ ಮರು ದಿನ ಬೆಳಗ್ಗೆ ಮಖಾ ನಕ್ಷತ್ರದಂದು ರಥೋತ್ಸವ ನಡೆಸುವುದು ವಾಡಿಕೆಯಾಗಿದೆ. ಅದರಂತೆ ಶುಕ್ರವಾರ ರಾತ್ರಿ ವಧು-ವರರಂತೆ ಅಲಂಕೃತ ಗೊಂಡಿದ್ದ ಭ್ರಮರಾಂಭ, ಮಲ್ಲಿಕಾರ್ಜುನ ಉತ್ಸವ ಮೂರ್ತಿಗಳಿಗೆ ದೇವಾಲಯದ ಆವರಣದಲ್ಲಿ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಶಾಸ್ತ್ರೋಪ್ತವಾಗಿ ಮಾಡಲಾಯಿತು. ಈ ಸಂದರ್ಭದಲ್ಲಿ ಅವಿವಾಹಿತ ಯುವಕ-ಯುವತಿಯರು ಪೂಜೆ ಸಲ್ಲಿಸಿದರು.
ಬೆಟ್ಟದ ಮೇಲಿರುವ ದೇವಾಲಯದಲ್ಲಿಯೂ ಮುಂಜಾನೆ 4 ರಿಂದಲೇ ಪೂಜಾ ವಿಧಿ-ವಿಧಾನಗಳು ಆರಂಭಗೊಂಡವು . ಸಾವಿರಾರು ಭಕ್ತಾಧಿಗಳು ಬಿರು ಬಿಸಿಲನ್ನು ಲೆಕ್ಕಿಸದೆ 3600 ಮೆಟ್ಟಿಲುಗಳ ಮೂಲಕ ಬೆಟ್ಟವನ್ನೇರಿ ದೇವರ ದರ್ಶನ ಪಡೆದು ಹರಕೆ ಕಾಣಿಕೆಗಳನ್ನು ಸಮರ್ಪಿಸಿದರು.
ಸಂಜೆ ವೇಳೆಗೆ ರಥಗಳು ಸ್ವಸ್ಥಾನಕ್ಕೆ ತಲುಪಿದ ನಂತರ ಹಂಸವಾಹನದ ಮೇಲೆ ಮೆರವಣಿಗೆ ಮಾಡಿ ಶಾಂತೋತ್ಸವ ನೆರವೇರಿಸಲಾಯಿತು.
ಗಿರಿಜಾ ದೇವಿಗೆ ಮುತೈದೆಯರು ಮಡಿಲು ತುಂಬಿದರು. ದೇವಾಲಯಕ್ಕೆ ಉತ್ಸವಮೂರ್ತಿಗಳು ಹಿಂದಿರುಗಿದ ನಂತರ ಮಹಾಮಂಗಳಾರತಿ ಮಾಡಲಾಯಿತು. ಎಲ್ಲಾ ಉತ್ಸವಗಳ ನಿರ್ವಹಣೆಯನ್ನು ಉಪ್ಪಾರ ಸಮುದಾಯದವರು ನಡೆಸಿಕೊಟ್ಟರು.
ಜಾತ್ರಾ ಮೈದಾನದಲ್ಲಿ ಸಿಹಿ ತಿಂಡಿಗಳು ಹಾಗೂ ಆಟೋಟಗಳ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯಿತು. ಮುಜರಾಯಿ ಹಾಗೂ ತಾಲ್ಲೂಕು ಆಡಳಿತ ಇಲಾಖೆಗಳಿಂದ ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದ ವಿಶೇಷವಾಗಿ ಸಿಂಗರಿಸಲಾಗಿತ್ತು. ಜಾತ್ರೆಗೆ ಆಗಮಿಸಿದ್ದ ಭಕ್ತಾಧಿಗಳಿಗೆ ಗ್ರಾಮಸ್ಥರಿಂದ ತೇರಿನ ಬೀದಿಯಲ್ಲಿ ಅನ್ನದಾನ, ಪಾನಕ ಹಾಗೂ ಮಜ್ಜಿಗೆಯ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೆÇಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.
ಆಶ್ರಯ ಸಮಿತಿ ಅಧ್ಯಕ್ಷ ನಿತೀನ್ ವೆಂಕಟೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಯ್ಯರ್ ಗಿರೀಶ, ತಹಶೀಲ್ದಾರ್ ಕುಂಞ ಅಹಮ್ಮದ್, ಉಪತಹಶೀಲ್ದಾರ್ ಶಶಿಧರ್, ಕಂದಾಯ ನಿರೀಕ್ಷಕ ಅಜ್ಮಲ್ ಶರೀಫ್, ಪಿ.ಡಿ.ಓ ಮಂಜುನಾಥ್, ಗ್ರಾಮಲೆಕ್ಕಿಗ ಗುರುನಾಯಕ್ ವೀಕ್ಷಿತಾ, ಚೈತ್ರಾ, ಗ್ರಾಮಪಂಚಾಯಿತಿ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.