
ಕುರುಗೋಡು:ಮಾ.7
ಪಟ್ಟಣದ ಐತಿಹಾಸಿಕ ಶ್ರೀ ದೊಡ್ಡ ಬಸವೇಶ್ವರ ಸ್ವಾಮಿ ಮಹಾರಥೋತ್ಸವ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ನಡುವೆ ವಿಜೃಂಬಣೆಯಿಂದ ಜರುಗಿತು.
ಪಟ್ಟಣದ ಸುತ್ತಮುತ್ತಲಿನ ರಾಜ್ಯ, ಜಿಲ್ಲೆ, ತಾಲೂಕು ಮತ್ತು ಗ್ರಾಮಗಳಿಂದ ಭಕ್ತರು ಪಾದಯಾತ್ರೆ, ಎತ್ತಿನ ಬಂಡಿ ಮತ್ತು ಟ್ರಾಕ್ಟರಗಳು ಇನ್ನಿತರ ವಾಹನಗಳ ಮುಖಾಂತರ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿದ್ದರು.
ರಥೋತ್ಸವದ ಮೊದಲಿಗೆ ಕೆರೆಕೆರೆ, ಮುಷ್ಟಗಟ್ಟೆ ಮತ್ತು ಸೋಮಲಾಪುರ ಗ್ರಾಮಗಳ ವಾಲ್ಮೀಕಿ ಜನಾಂಗದವರು ಧೂಳುಗಾಯಿ, ಕಳಸ ಮತ್ತು ಪೂರ್ಣ ಕುಂಭವನ್ನು ಮಧ್ಯಾಹ್ನದ ಹೊತ್ತಿಗೆ ಸಮರ್ಪಿಸಿದರು.
ನಂತರ ಶ್ರೀ ಸ್ವಾಮಿ ಗೂಳಿ(ಬಸವ)ಯನ್ನು ಅಲಂಕಾರ ಮಾಡಿ ಸಕಲ ವಾಧ್ಯವೃಂದ ಹಾಗೂ ಕಳಸ ಮುತ್ತೈದೆಯರ ಮೂಲಕ ಶ್ರೀ ಶಿವ ಶರಣೆ ನೀಲಮ್ಮ ನವರ ಮಠಕ್ಕೆ ಹೋಗಿ ಅಲ್ಲಿಂದ ಮಠದ ಸ್ವಾಮಿಗಳನ್ನು ಮೆರವಣಿಗೆ ಮೂಲಕ ಕರೆ ತಂದು ರಥದಲ್ಲಿ ಕೂಡಿಸಿ, ಜೋತೆಗೆ ಶ್ರೀ ದೋಡ್ಡಬಸವೇಶ್ವರ ಸ್ವಾಮಿ ಉತ್ಸವ ಮೂರ್ತಿಯನ್ನು ಕೂಡಿಸಲಾಯಿತು.
ಶ್ರೀ ದೊಡ್ಡಬಸವೇಶ್ವರ ಮಹಾರಥೋತ್ಸವದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲಿನ ಗ್ರಾಮಸ್ಥರು ಉತ್ಸಹದಿಂದ ಆಗಮಿಸುವುದು ಕಂಡು ಬಂತು. ಅಲ್ಲದೆ ಪಕ್ಕದ ರಾಯಚೂರು, ಕೊಪ್ಪಳ, ಗದಗ್, ಹುಬ್ಬಳಿ, ದಾವಣಗೇರಿ ಸೇರಿದಂತೆ ನಾನಾ ಜಿಲ್ಲೆ ಹಾಗೂ ಪಕ್ಕದ ಆಂಧ್ರ, ಮಹರಾಷ್ಟಾ ಸೆರಿದಂತೆ ನಾನಾ ರಾಜ್ಯದಿಂದ ಲಕ್ಷಕ್ಕೂ ಹೆಚ್ಚಿನ ಜನಸ್ತೋಮ ಆಗಮಿಸಿದ್ದರು.
ಪೊಲೀಸ್ ಇಲಾಖೆವತಿಯಿಂದ ಪಟ್ಟಣಕ್ಕೆ ಪ್ರವೇಶಿಸುವ ರಸ್ತೆ ಗಳಲ್ಲಿ ಬ್ಯಾರಿಕೇಡ್‍ಗಳನ್ನು ಅಳವಡಿಸಿ ಮಹಾರಥೋತ್ಸವಕ್ಕೆ ಆಗಮಿಸುವ ಭಕ್ತರ ವಹನಗಳನ್ನು ಪಾರ್ಕಿಂಗ್ ಜಾಗಗಳಲ್ಲಿ ವಹನಗಳನ್ನು ನಿಲ್ಲಿಸಿ ಭಕ್ತರನ್ನು ದೇವಸ್ಥಾನಕ್ಕೆ ಕಳುಹಿಸಿಕೊಡುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದರು.
ದೇವಸ್ಥಾನದಲ್ಲಿ ಸೂಕ್ತ ಭದ್ರತೆ ವ್ಯವಸ್ಥೆ ಒದಗಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ನೂಕು ನುಗ್ಗಲು ನಡೆಯದಂತೆ ಬ್ಯಾರಿಕೇಡ್‍ಗಳನ್ನು ದೇವಸ್ಥಾನದ ಮುಂಬಾಗದಲ್ಲಿ ಅಳವಡಿಸಲಾಗಿತ್ತು. ಭಕ್ತರು ಸಲಾಗಿ ದೇವಸ್ಥಾನಕ್ಕೆ ಬಂದು ಶ್ರೀ ದೊಡ್ಡಬಸವೇಶ್ವರ ದರ್ಶನ ಪಡೆಯತಿದ್ದರು.
ಭಕ್ತರು ಹರ್ಷೋದ್ಘಾರ ಮಾಡುತ್ತಾ ಸಂಜೆ. 6.10 ಗಂಟೆಯಿಂದ ರಥವನ್ನು ಎಳೆಯಲು ಪ್ರಾರಂಭಿಸಿದರು. ಸುಮಾರ 60 ಅಡಿ ಶ್ರೀ ದೋಡ್ಡಬಸವೇಶ್ವರ ಬೃಹತ್ ಮಹಾರಥವನ್ನು ದಾರಿಯುದ್ದಕ್ಕೂ ಜೈ ಶ್ರೀ ದೊಡ್ಡ ಬಸವೇಶ್ವರ, ಜೈ ಶ್ರೀ ದೊಡ್ಡ ಬಸವೇಶ್ವರ ಜೈಕಾರ ಹಾಕುತ್ತಾ ಭಕ್ತರು ಸಂಭ್ರಮ ಸಡಗರದಿಂದ ಎಳೆದರು. ಬಂದ ಭಕ್ತರು ತೇರಿಗೆ ಹೂ ಹಣ್ಣು ಎಸೆದು ಭಕ್ತಿ ಮೆರೆದರು. ಎದುರು ಬಸವಣ್ಣ ದೇವಸ್ಥಾನದವರೆಗೆ ರಥವನ್ನು ಎಳೆದೊಯ್ದು ಪುನಃ ಸ್ವಸ್ಥಳಕ್ಕೆ ಎಳೇದು ತಂದರು.
ಜಾತ್ರ ಸಮಯದಲ್ಲಿ ಮುಂಜಾಗ್ರತೆ ಕ್ರಮಗಳನ್ನು ಬಳ್ಳಾರಿ ಜಿಲ್ಲಾಧಿಕಾರಿಗಳು, ಹಿಂದು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಅಯುಕ್ತರು, ಪುರಸಭೆ ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿದ್ದು. ಅವರೊಂದಿಗೆ ಪೊಲೀಸ್ ಇಲಾಖೆ ಅಧಿಕಾರಿಗಳು ಅತಿ ಹೆಚ್ಚಿನ ಶ್ರಮ ಪಟ್ಟು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಿದ್ದರು.
ಗೆಣಿಕಿಹಾಳ್, ಮುಷ್ಟಗಟ್ಟೆ, ಬಳ್ಳಾರಿ, ಕಂಪ್ಲಿ ಮತ್ತು ಬಾದನಹಟ್ಟಿ ರಸ್ತೆಯಲ್ಲಿ ನಾನಾ ಸಂಘ ಸಂಸ್ಥೆಗಳು ಭಕ್ತರ ಬಿಸಿಲಿನ ತಾಪ ತಣಿಸಲು ಉಚಿತ ಮಜ್ಜಿಗೆ ಮತ್ತು ತಣ್ಣನೆಯ ಕುಡಿವ ನೀರಿನ ಅರವಟಿಗೆ ಮತ್ತು ಅನ್ನ ದಾಸೋಹ ನಡೆಯಿತು.
ಪಟ್ಟಣದ ರೈತ ಸಮುದಾಯ ಭವನದಲ್ಲಿ ಧರ್ಮಿಕ ಧತ್ತಿ ಇಲಾಖೆ ಉಚಿತ ಅನ್ನ ದಾಸೋಹ ಹಮ್ಮಿಕೊಂಡಿತ್ತು. ಅಲ್ಲದೆ ಕೊಟ್ಟೂರುಸ್ವಾಮಿಗಳ ಮಠದ ಪ್ರಾಂಗಣದಲ್ಲಿ ಮಹಾ ದಾಸೋಹ ಕಾರ್ಯಕ್ರಮ, ಸುಂಕ್ಲಮ್ಮ ದೇವಸ್ಥಾನಗಳಲ್ಲಿ ಅನ್ನದಾಸೋಹ ಏರ್ಪಡಿಸಲಾಗಿತ್ತು.
ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್ ಗಣೇಶ್ ಅವರು ಶ್ರೀ ದೊಡ್ಡ ಬಸವೇಶ್ವರ ಮಹಾರಥೋತ್ಸವ ದಿನದಂದು ಬೆಳಗಿನ ಜಾವ ಕಂಪ್ಲಿ ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ಎರಡನೇ ಸಂಕಲ್ಪ ಪಾದಯಾತ್ರೆ ನೆಲ್ಲುಡಿ ಕೊಟ್ಟ ಎಮ್ಮಿಗನೂರು, ಸೋಮಲಾಪುರ ಕ್ರಾಸ್ ಮಾರ್ಗವಾಗಿ ಕಲ್ಲುಕಂಬ ಕ್ರಾಸ್, ಲಕ್ಷ್ಮಿಪುರ ಶ್ರೀನಿವಾಸ ಕ್ಯಾಂಪ್ ಎಲ್ಲಾಪುರ ಕ್ರಾಸ್ ಮೂಲಕ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನಕ್ಕೆ ತಲುಪಿ ದರ್ಶನ ಪಡೆದು ಸಂಜೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ಪಾದಯಾತ್ರೆ ಬರುವ ದಾರಿ ಯುದ್ದಕ್ಕೂ ಸುಮಂಗಲಿಯರು ಕಳಶ ಬೆಳಗಿ ಬರಮಾಡಿಕೊಳ್ಳುವ ದೃಶ್ಯ ಕಂಡು ಬಂತು.
ಕಂಪ್ಲಿ ಕ್ಷೇತ್ರದ ಮಾಜಿ ಶಾಸಕ ಟಿ.ಹೆಚ್.ಸುರೇಶ್ ಬಾಬು ಅವರು ಶ್ರೀ ದೊಡ್ಡ ಬಸವೇಶ್ವರ ಮಹಾ ರಥೋತ್ಸವ ದಿನದಂದು ಬೆಳಗಿನ ಜಾವ ಕೊರ್ಲಾಗುಂದಿ ಶ್ರೀ ಹಾಲು ಬಸವೇಶ್ವರ ದೇವಸ್ಥಾನದಿಂದ ಪಾದಯಾತ್ರೆ ಪ್ರಾರಂಭಗೊಂಡು ಕೋಳೂರು ಮಾರ್ಗವಾಗಿ ಮದಿರೆ, ವದ್ದಟ್ಟಿ, ಬಾದನಹಟ್ಟಿ ಮೂಲಕ ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನಕ್ಕೆ ತಲುಪಿ ದರ್ಶನ ಪಡೆದು ಸಂಜೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ರಾಜು ನಾಯಕ ಅವರು ಶ್ರೀ ದೊಡ್ಡ ಬಸವೇಶ್ವರ ಮಹಾ ರಥೋತ್ಸವ ದಿನದಂದು ಬೆಳಗಿನ ಜಾವ ಓರ್ವಯಿ ಕ್ರಾಸ್ ಕಾಲುವೆ ಪಕ್ಕದಲ್ಲಿರುವ ಶ್ರೀ ಶಾಂಭವಿ ದೇವಸ್ಥಾನದಿಂದ ಪ್ರಾರಂಭಗೊಂಡ ಪಾದಯಾತ್ರೆ ಸೋಮಲಾಪುರ ಕ್ರಾಸ್, ಕಲ್ಲುಕಂಬ ಕ್ರಾಸ್, ಲಕ್ಷ್ಮಿಪುರ ಕ್ರಾಸ್, ಶ್ರೀನಿವಾಸ್ ಕ್ಯಾಂಪ್, ಎಲ್ಲಾಪುರ ಕ್ರಾಸ್, ಮುಖಾಂತರ ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನಕ್ಕೆ ತಲುಪಿ ದರ್ಶನ ಪಡೆದು ಸಂಜೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.