ವಿಜಯ ಸಂಕಲ್ಪ ಯಾತ್ರೆ ಸಮಾರೋಪಕ್ಕೆ 10 ಲಕ್ಷ ಜನರು: ಸಂಸದ ಸಿದ್ದೇಶ್ವರ್

ದಾವಣಗೆರೆ.ಮಾ.೨೪; ಇದೇ 25ರಂದು ನಡೆಯುವ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು, ಒಟ್ಟು 10 ಲಕ್ಷ ಭಾಗವಹಿಸಲಿದ್ದಾರೆ. ಕೇವಲ ದಾವಣಗೆರೆ ಜಿಲ್ಲೆಯಿಂದ 3 ಲಕ್ಷ ಜನರು ಪಾಲ್ಗೊಳ್ಳುತ್ತಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ತಿಳಿಸಿದರು.ದಾವಣಗೆರೆಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯು ಈಗಾಗಲೇ ಕೇಸರಿಮಯವಾಗಿದೆ. ಜಿಎಂಐಟಿ ಕಾಲೇಜಿನ ಪಕ್ಕದಲ್ಲಿ 400 ಎಕರೆ ಜಾಗದಲ್ಲಿ ಪೆಂಡಾಲ್ ಹಾಕಲಾಗಿದೆ. ಪೆಂಡಾಲ್‍ನಲ್ಲಿ ಜನರ ಮಧ್ಯೆ ಹೋಗಬೇಕೆಂದು ಮೋದಿಜಿ ಅವರು ಅಪೇಕ್ಷಿಸಿದ್ದು, ಅದಕ್ಕೆ ತಕ್ಕಂತೆ ರಸ್ತೆ ಏರ್ಪಡಿಸಲಾಗಿದೆ ಎಂದರು.ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ- ರಾಜ್ಯದ ಸಚಿವರು, ಇತರ ಪ್ರಮುಖರು ಭಾಗವಹಿಸುತ್ತಾರೆ. ಕರ್ನಾಟಕದಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಈ ಸಭೆ ನಡೆಯಲಿದೆ. ಬಿಜೆಪಿಯ 150ಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸುವ ಕಾರ್ಯಕ್ರಮ ಇದಾಗಲಿದೆ ಎಂದು ನುಡಿದರು.ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, 4 ವಿಜಯ ಸಂಕಲ್ಪ ಯಾತ್ರೆಗಳು ಯಶಸ್ವಿಯಾಗಿವೆ. 5,600 ಕಿಮೀಗಳನ್ನು ಒಟ್ಟು ಯಾತ್ರೆ ಮೂಲಕ ಕ್ರಮಿಸಲಾಗಿದೆ. ಲಕ್ಷಾಂತರ ಜನರು ಸೇರಿದ್ದರು; 224 ಕ್ಷೇತ್ರಗಳನ್ನೂ ತಲುಪಿದ್ದೇವೆ. ಬಿಜೆಪಿ ಪರ ಅಲೆ ಸೃಷ್ಟಿಯಾಗಿದೆ ಎಂದು ವಿವರಿಸಿದರು.