ವಿಜಯ ಸಂಕಲ್ಪ ಯಾತ್ರೆಯಿಂದ ಕಾಂಗ್ರೆಸ್ ಮುಖಂಡರು ಗಾಬರಿಯಾಗಿದ್ದಾರೆ. 

ಹರಪನಹಳ್ಳಿ.ಮಾ.೧೮ : ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಅಂಗವಾಗಿ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮುಖಂಡರು, ಪಕ್ಷವನ್ನು ಗೆಲ್ಲಿಸುವಂತೆ ಕೋರಿದರು. ಆದರೆ, ಯಾರು ಕೂಡ ಸ್ಥಳೀಯ ಹಾಲಿ ಶಾಸಕ ಜಿ.ಕರುಣಾಕರ ರೆಡ್ಡಿ ಅವರ ಹೆಸರು ಪ್ರಸ್ತಾಪಿಸಲಿಲ್ಲ. ಇದು ಚರ್ಚೆಗೆ ಗ್ರಾಸವಾಯಿತು. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ,ಇಲ್ಲಿನ ಜನರ ಉತ್ಸಾಹ ನೋಡಿದರೆ, ಮತ್ತೊಮ್ಮೆ ಬಿಜೆಪಿ ಗೆಲ್ಲುತ್ತದೆ ಎಂದರು.ಶಾಸಕ ಜಗದೀಶ್ ಶೆಟ್ಟರ್, ರಾಜ್ಯದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಿಂದ ಕಾಂಗ್ರೆಸ್ ಮುಖಂಡರು ಗಾಬರಿಯಾಗಿದ್ದಾರೆ. ಬರುವ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ, ಕಾಂಗ್ರೆಸ್ ಧೂಳಿಪಟ ಮಾಡಿ’ ಎಂದು ಕೋರಿದರು.ಸಾರಿಗೆ ಸಚಿವ ಬಿ. ಶ್ರೀರಾಮುಲು, 1998ರಲ್ಲಿ ನನಗೆ ಮತ್ತು ಕರುಣಾಕರ ರೆಡ್ಡಿ ಅವರಿಗೆ ರಾಜಕೀಯ ಜನ್ಮ ಕೊಟ್ಟ ಕ್ಷೇತ್ರ ಹರಪನಹಳ್ಳಿ. ಇದು ಬಿಜೆಪಿಗೆ ಶಕ್ತಿ ಕೊಟ್ಟ ತಾಲ್ಲೂಕು. ಆದರೆ, ಇಲ್ಲಿ ಕಾಂಗ್ರೆಸ್ ಮುಖಂಡರು ಗೆಲುವಿನ ಹಗಲು ಕನಸು ಕಾಣುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಗೆ ಅವಕಾಶ ಮಾಡಿಕೊಟ್ಟರೆ ಈ ಭಾಗದ ಸಮಗ್ರ ಅಭಿವೃದ್ದಿ ಮಾಡುತ್ತೇವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಸಂಸದರಾದ ಜಿ.ಎಂ.ಸಿದ್ದೇಶ್ವರ್, ವೈ.ದೇವೇಂದ್ರಪ್ಪ, ಶಾಸಕ ಜಿ.ಕರುಣಾಕರ ರೆಡ್ಡಿ, ರಾಜ್ಯ ಪ್ರಕೋಷ್ಠ ಸಹ ಸಂಚಾಲಕ ಜಿ.ನಂಜನಗೌಡ, ಪಿ.ಮಹಾಬಲೇಶ್ವರ ಗೌಡ, ಸಂಚಾಲಕ ಚಂದ್ರಶೇಖರ್ ಪೂಜಾರ್, ಮಂಡಲ ಅಧ್ಯಕ್ಷ ಸತ್ತೂರು ಹಾಲೇಶ್, ಪೂಜಪ್ಪ, ಕೋಡಿಹಳ್ಳಿ ಭೀಮಪ್ಪ, ಎಚ್.ಎಂ.ಅಶೋಕ, ಭೀಮವ್ವ, ಸುವರ್ಣ, ಆರುಂಡಿ ನಾಗರಾಜ್, ಕಣಿವಿಹಳ್ಳಿ ಮಂಜುನಾಥ, ಸೂರ್ಯ ಪಾಪಣ್ಣ, ರಾಘವೇಂದ್ರ ಇದ್ದರು.