ವಿಜಯ ಸಂಕಲ್ಪ ಯಾತ್ರೆಗೆ ವಿರೋಧ: ರೈತ ಸಂಘ ಎಚ್ಚರಿಕೆ

ಬೀದರ್: ಮಾ.2:ಹಿಂದೆ ಭರವಸೆ ನೀಡಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬೀದರ್ ಸಹಕಾರ ಸಕ್ಕರೆ ಕಾರ್ಖಾನೆಗೆ ? 100 ಕೋಟಿ ದೊರಕಿಸಿಕೊಡದಿದ್ದರೆ ಬಿಜೆಪಿಯ ವಿಜಯ ಸಂಕಲ್ಪ ರಥ ಯಾತ್ರೆಯನ್ನು ವಿರೋಧಿಸಲಾಗುವುದು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ರಥ ಯಾತ್ರೆಗಾಗಿ ಶಾ ಬೀದರಗೆ ಬರುತ್ತಿದ್ದಾರೆ. ಅವರು ಕೊಟ್ಟ ಮಾತಿನಂತೆ ಕಾರ್ಖಾನೆಗೆ ಅನುದಾನ ಕಲ್ಪಿಸಿ ಯಾತ್ರೆ ಮಾಡಿಕೊಳ್ಳಲಿ ಎಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ಕಾರ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ನೋಂದಣಿ ಮಾಡಿಸಿದ ಎಲ್ಲ ರೈತರಿಗೂ ಬೆಳೆ ಹಾನಿ ಪರಿಹಾರ ಕೊಡಬೇಕು. ಮಹಾರಾಷ್ಟ್ರ ಮಾದರಿಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ? 2,800 ಬೆಲೆ ಕೊಡಬೇಕು. ಕೃಷಿಗೆ ಹಗಲು ಹೊತ್ತಿನಲ್ಲಿ 12 ತಾಸು ಮೂರು ಫೇಸ್ ವಿದ್ಯುತ್ ಪೂರೈಸಬೇಕು. ರೈತರು ಬೆಳೆದ ಎಲ್ಲ ಧಾನ್ಯಗಳನ್ನು ಸರ್ಕಾರ ಖರೀದಿಸಬೇಕು ಎಂದು ಆಗ್ರಹಿಸಿದರು.

ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಕೊಂಡಿಬಾರಾವ್ ಪಾಂಡ್ರೆ, ಮುಖಂಡರಾದ ವಿಠ್ಠಲರಾವ್ ಮೇತ್ರೆ, ನಾಗಶೆಟ್ಟಿ ಲಂಜವಾಡೆ, ವಿಠ್ಠಲರೆಡ್ಡಿ ಆಣದೂರು, ವೀರಾರೆಡ್ಡಿ ಪಾಟೀಲ, ಚನ್ಮಲ್, ಪ್ರಭಾವತಿ, ಷಣ್ಮುಕಪ್ಪ ಆಣದೂರು, ಬಸವರಾಜ ಅಷ್ಟೂರು, ಶಿವರಾಜ ಜಲ್ದೆ, ರಾಜಕುಮಾರ ಹೊಸಳ್ಳಿ, ಬಸವರಾಜ ಅಷ್ಟೂರು, ನಿತೀಶ್ ಪಾಟೀಲ ಇದ್ದರು.