ವಿಜಯ ಸಂಕಲ್ಪಯಾತ್ರೆಯಲ್ಲ, ಅಪವಿಜಯ ಸಂಕಲ್ಪಯಾತ್ರೆ

ಏಮ್ಸ್ ಹೋರಾಟಕ್ಕೆ ಹೆದರಿ ಜಿಲ್ಲೆಗೆ ಸಿಎಂ ಬರುತ್ತಿಲ್ಲ
ರಾಯಚೂರು, ಮಾ.೯- ಬಿಜೆಪಿಯದ್ದು ವಿಜಯ ಸಂಕಲ್ಪಯಾತ್ರೆಯಲ್ಲ, ಅಪವಿಜಯ ಸಂಕಲ್ಪಯಾತ್ರೆ ಎಂದ ಅವರು ಏಮ್ಸ್ ಹೋರಾಟಕ್ಕೆ ಹೆದರಿ ಜಿಲ್ಲೆಗೆ ಮುಖ್ಯಮಂತ್ರಿ ಬರಲು ಹೆದರುತ್ತಿದ್ದಾರೆ ಎಂದು ರಾಯಚೂರು ಜಿಲ್ಲಾ ಏಮ್ಸ್ ಹೋರಾಟ ಸಮಿತಿ ಸಂಚಾಲಕ ಅಶೋಕಕುಮಾರ ಜೈನ್ ಹೇಳಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ,ಕಳೆದ ಎರಡು ಬಾರಿ ಜಿಲ್ಲೆಗೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಯಚೂರಿನಲ್ಲಿಯೇ ಏಮ್ಸ್ ಸ್ಥಾಪನೆ ಮಾಡುವುದಾಗಿ ಹೇಳಿ ಹೋಗಿ ಈವರೆಗೂ ಆ ಕುರಿತು ಸಕಾರಾತ್ಮಕ ಚಟುವಟಿಕೆಯಲ್ಲಿ ತೊಡಗದೆ ದುರ್ಬಲ ಮುಖ್ಯಮಂತ್ರಿಯಾಗಿ ಕಂಗೊಳಿಸುತ್ತಿದ್ದಾರೆ. ಏಮ್ಸ್ ಹೋರಾಟದ ಬಿಸಿ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳು ರಾಯಚೂರು ಪ್ರವಾಸವನ್ನು ರದ್ದು ಮಾಡಿದ್ದು, ಅವರ ಜಾಗೆಯಲ್ಲಿ ಐಐಟಿ ರಾಯಚೂರಿಗೆ ಕೊಡಬೇಕೆಂದು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ನಂತರ ಅದನ್ನು ಹುಬ್ಬಳ್ಳಿ ಧಾರವಾಡಕ್ಕೆ ತೆಗೆದುಕೊಂಡು ಹೋದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರು ಆಗಮಿಸುತ್ತಿದ್ದಾರೆ. ಈ ವಿಜಯ ಸಂಕಲ್ಪ ಯಾತ್ರೆಯನ್ನು ಏಮ್ಸ್ ಹೋರಾಟ ಸಮಿತಿ ಖಂಡಿಸುತ್ತದೆ. ಮತ್ತು ಪ್ರತಿರೋಧವನ್ನು ಒಡ್ಡುತ್ತದೆ. ಅದು ಯಾವ ರೀತಿಯದ್ದು ಎಂದು ಈಗ ಬಹಿರಂಗಪಡಿಸಲಾಗದು. ಏಮ್ಸ್ ಹೋರಾಟವನ್ನು ಹಗುರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಅದರ ಪರಿಣಾಮ ಎದುರಿಸುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಭಾರತೀಯ ಜನತಾಪಕ್ಷದವರಿಗೆ ಒಂದು ಬಹಿರಂಗ ಸಭೆ ಏರ್ಪಡಿಸುವ ಧೈರ್ಯ ಇಲ್ಲದಂತೆ ಮಾಡಿರುವುದು ಏಮ್ಸ್ ಹೋರಾಟದ ಪ್ರತಿಫಲ. ರಾಜ್ಯ ಸರ್ಕಾರಕ್ಕೆ ನಮ್ಮ ಹೋರಾಟದ ಬಿಸಿ ಮುಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಡ. ನೀವು ಎಷ್ಟು ನಮ್ಮನ್ನು ನಿರ್ಲಕ್ಷಿಸುತ್ತೀರಿ. ನಿಮ್ಮ ನಿರ್ಧಾರ ನಮ್ಮ ಪರವಾಗಿರದಿದ್ದರೆ ಮತ್ತೇ ತೆಲಂಗಾಣ ಮಾದರಿಯ ಹೋರಾಟಕ್ಕೆ ಚಾಲನೆ ನೀಡಲಾಗುವುದು ಮಾತ್ರವಲ್ಲ ಪ್ರತ್ಯೇಕ ರಾಜ್ಯದ ಕೂಗು ಪ್ರಬಲವಾಗಿ ನಮ್ಮ ರಾಜ್ಯ ಸ್ಥಾಪನೆಗೆ ನಾವು ಸಿದ್ಧರಾಗಬೇಕಾಗುತ್ತದೆ. ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಎನ್.ಮಹಾವೀರ ಉದಯಕುಮಾರ, ರಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.