ವಿಜಯ ಸಂಕಲ್ಪಯಾತ್ರೆಗೆ ಭೂಮಿ ಪೂಜೆ

ದಾವಣಗೆರೆ. ಮಾ.೧೬: ದಾವಣಗೆರೆಯಲ್ಲಿ ಮಾ. ೨೫ ರಂದು ನಡೆಯುವ ವಿಜಯಸಂಕಲ್ಪ ಯಾತ್ರೆಯ ಮಹಾಸಂಗಮದ ಭೂಮಿ ಪೂಜೆಯನ್ನು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ನೆರವೇರಿಸಿದರು.
ಜಿಎಂಐಟಿ ಪಕ್ಕದ ನಾಲ್ಕು ನೂರು ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಬೃಹತ್ ವೇದಿಕೆ ಮತ್ತು ಸಭಾಂಗಣದ ಭೂಮಿಪೂಜೆ ಜೊತೆಗೆ ಪಕ್ಷದ ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶುಭಮುಹೂರ್ತದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿದೆ. ನಿರ್ವಿಘ್ನವಾಗಿ ಸಭೆ ನಡೆಯಲಿ ಎಂದು ಆಶಿಸಿದರು.
ದಾವಣಗೆರೆಗೆ ದೊಡ್ಡ ಸವಾಲಿನ ಕಾರ್ಯಕ್ರಮ ನೀಡಲಾಗಿದೆ. ಸೆ. ೧ ರಂದು ಮಂಗಳೂರಿನಲ್ಲಿ ಚೌತಿಯ ಕೊನೆಯ ದಿನ ಆಗಿತ್ತು. ಮೂರುವರೆ ಲಕ್ಷ ಜನರು ಸೇರಿ ಅಭೂತಪೂರ್ವ ಸ್ವಾಗತ ಕೋರಿದರು. ಅಂದಿನಿಂದ ಈವರೆಗೆ ನಡೆದ ಹದಿಮೂರು ಕಾರ್ಯಕ್ರಮಗಳಲ್ಲಿ ಲಕ್ಷಾಂತರ ಜನರು ಸೇರಿದ್ದು ಇದೆ. ದಾವಣಗೆರೆಯಲ್ಲಿ ಹತ್ತು ಲಕ್ಷ ಜನರ ಸೇರಿಸುವ ಮೂಲಕ ರಾಜ್ಯದಲ್ಲೇ ಮೊದಲ ದೊಡ್ಡ ಸಮಾವೇಶ ನಡೆಯಲಿದೆ. ಇಂದಿನಿಂದಲೇ ಎಲ್ಲ ಸಂಸದರು, ಶಾಸಕರು,ವಿಧಾನ ಪರಿಷತ್ ಸದಸ್ಯರು, ನಾಯಕರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೋದಿಯವರು ಬರುತ್ತಿದ್ದಾರೆ ಎಂದು ತಿಳಿಸಬೇಕು. ಜನರು ಮತ್ತು ಮತದಾರರು ಮೋದಿಯವರನ್ನು ನೋಡಲಿಕ್ಕೆ ಉತ್ಸುಕರಾಗಿದ್ದಾರೆ. ಅವರನ್ನು ಕರೆ ತರುವ ಜೊತೆಗೆ ಬಹಳ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ದಾವಣಗೆರೆ ರಾಜ್ಯದ ಕೇಂದ್ರ ಬಿಂದು. ಇಲ್ಲಿ ನಡೆದ ಎಲ್ಲಾ ಕಾರ್ಯಕ್ರಮ ಯಶಸ್ವಿಯಾಗಿವೆ. ಬಿಜೆಪಿ ಗೆಲುವೂ ಸಾಧಿಸಿದೆ. ಈ ಬಾರಿ ಖಂಡಿತವಾಗಿಯೂ ನಮ್ಮ ೧೫೦ ಹೆಚ್ಚು ಟಾರ್ಗೆಟ್ ದಾಟಿಯೇ ದಾಟುತ್ತೇವೆ. ಯಾವುದೇ ಹಂಗಿಲ್ಲದೆ ಅಧಿಕಾರಕ್ಕೆ ಬರುತ್ತೇವೆ. ಅದರ ಬಗ್ಗೆ ಯಾರಿಗೂ ಭಯಬೇಡ. ಸಂಶಯ ಬೇಡ. ಯಾರಿಗಾದರೂ ಸಂಶಯ ಇದ್ದರೆ ಬಂದು ಮಾತನಾಡಿ. ಭಯ ಬೇಡ ಎಂದು ತಿಳಿಸಿದರು.
ಸಂಸದರಾದ ಡಾ.ಜಿ.ಎಂ. ಸಿದ್ದೇಶ್ವರ, ವೈ. ದೇವೇಂದ್ರಪ್ಪ, ಶಾಸಕರಾದ ಎಸ್. ಎ. ರವೀಂದ್ರನಾಥ್, ಪ್ರೊ. ಲಿಂಗಣ್ಣ, ಅರುಣ್ ಪೂಜಾರಿ, ಎಸ್.ವಿ. ರಾಮಚಂದ್ರ, ಕೆ.ಎಸ್. ನವೀನ್, ಸೋಮಲಿಂಗಪ್ಪ, ಸೋಮಶೇಖರ ರೆಡ್ಡಿ ಇತರರು ಇದ್ದರು.