ವಿಜಯ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ ’ನೃತ್ಯ-ಗಾನ-ವೈಭವ’ ಸಾಂಸ್ಕೃತಿಕ ಕಾರ್ಯಕ್ರಮ

ಸೂಟರ್‌ಪೇಟೆ, ಮಾ.೩೧- ಸಂಘಟನೆಯಿಂದ ಸಮಾಜ ಬೆಳೆಯುತ್ತದೆ. ಸಮಾಜದಲ್ಲಿ ನಡೆಯುತ್ತಿರುವ ಯಾವುದೇ ಕಾರ್ಯಕ್ರಮಗಳು ಸಂಘಟನೆಯ ಬೆಳವಣಿಗೆಯನ್ನು ಸೂಚಿಸುತ್ತದೆ. ಸಂಘಟನೆ ಸಮಾಜದ ಶಕ್ತಿಯಾಗಿದೆ. ಹಾಗಾಗಿ ಸಂಘಟನೆಯಿಂದ ಯುವಶಕ್ತಿ ಬಲಶಾಲಿಯಾಗಲಿ ಎಂದು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರರು, ನಿವೃತ್ತ ಪದವೀಧರ ಮುಖೋಪಧ್ಯಾಯರಾದ ಶ್ರೀ ಎಸ್. ರಾಘವೇಂದ್ರ ಅವರು ಹೇಳಿದ್ದಾರೆ.

ಅವರು ಸೂಟರ್ ಪೇಟೆ ಶ್ರೀ ಕೋರ್ದಬ್ಬು ದೇವಸ್ಥಾನದ ಶ್ರೀ ಬಬ್ಬುಸ್ವಾಮಿ ರಂಗ ಮಂದಿರ” ದಲ್ಲಿ ವಿಜಯ ಫ್ರೆಂಡ್ಸ್ ಸರ್ಕಲ್ ಆಯೋಜಿಸಿದ ‘ ನೃತ್ಯ-ಗಾನ-ವೈಭವ‘ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಕಾರ್ಪೋರೇಟರ್ ಅಪ್ಪಿ ಎಸ್. ವಹಿಸಿದ್ದರು. ಕ್ರೀಡಾ ಅಂಕಣಕಾರ ಶ್ರೀ ಎಸ್.ಜಗದೀಶ್ಚಂದ್ರ ಅಂಚನ್, ನಿವೃತ್ತ ಪ್ರಾಂಶುಪಾಲ (ಐಟಿಐ)ರಾದ ಶ್ರೀ ಎಸ್.ಸದಾನಂದ, ಎಸ್.ಬಿ.ಇಂಡಸ್ಟ್ರೀಸ್ ಮಾಲಕರಾದ ಶ್ರೀ ಎಸ್.ಬಾಬು, ವಿಜಯ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷೆ  ಶ್ರೀಮತಿ ರೇವತಿ ಲಕ್ಷ್ಮಣ್, ಗೌರವ ಸಲಹೆಗಾರರಾದ ಶ್ರೀಮತಿ ವೇದಾ ವಿಶ್ವನಾಥ್, ಉಪಾಧ್ಯಕ್ಷ ಶ್ರೀ ರೋಶನ್ ಲೂವಿಸ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.

ಸಮ್ಮಾನ : ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ

ಶ್ರೀ ಭಾಸ್ಕರ್ ವರ್ಕಾಡಿ, ಶ್ರೀ ಶುಭೋದಯ್ ಎಸ್. ಹಾಗೂ  ಶ್ರೀ ಶುಭಂ ಕುಲಾಲ್  ಇವರನ್ನು ಸಮ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ವಿಜಯ ಫ್ರೆಂಡ್ಸ್ ಸರ್ಕಲ್ ನಿರ್ಮಾಣದಲ್ಲಿ  ಶ್ರೀ ಅಜಯ್ ರಾಜ್ ಶೆಟ್ಟಿ ಸಾಹಿತ್ಯದ, ಶ್ರೀ ಮಂಜುನಾಥ್ ಪ್ರಸಾದ್ ಸಂಕಲನದಲ್ಲಿ ಹಾಗೂ ವಿಶಿಷ್ಟ ಸಂಗೀತ ನೀಡಿ ಶ್ರೀ ಶುಭಂ ಕುಲಾಲ್ ಹಾಡಿರುವ “ದೈವರಾಜೆ ಸೂಟರ್ ಪೇಟೆದ ಸತ್ಯ ವಿಡಿಯೋ ಆಧಾರಿತ ಭಕ್ತಿಗೀತೆ ಅಲ್ಬಂನ್ನು ಶ್ರೀ ಎಸ್.ರಾಘವೇಂದ್ರ ಇವರು ಬಿಡುಗಡೆ ಮಾಡಿದರು.

ಶ್ರೀಮತಿ ಭವಾನಿ ಸುದೇಶ್ ಪ್ರಾರ್ಥಿಸಿದರು. ಶ್ರೀಮತಿ ಚಂದ್ರಿಕಾ ನಾಗರಾಜ್ ಸ್ವಾಗತಿಸಿದರು. ಶ್ರೀ ರವಿರಾಜ್ ಎಸ್ ವಂದಿಸಿದರು. ಕಾರ್ಯಕ್ರಮವನ್ನು ಶ್ರೀ ಶಿವಪ್ರಸಾದ್ ಭಟ್ ನಿರೂಪಿಸಿದರು. ನಂತರ “ನೃತ್ಯ-ಗಾನ-ವೈಭವ” ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಜನ ಮೆಚ್ಚುಗೆ ಪಡೆಯಿತು.