ವಿಜಯ್ ಸಿಂಗ್ ಗೆ ಕೈತಪ್ಪಿದ ಟಿಕೆಟ್: ಪ್ರತಿಭಟನೆ

ಬೀದರ:ಮಾ.23: ಬಸವಕಲ್ಯಾಣ ಉಪ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ಎಂಎಲ್‌ಸಿ ವಿಜಯಸಿಂಗ್‌ ಅವರಿಗೆ ಟಿಕೆಟ್‌ ಕೈತಪ್ಪಿರುವುದನ್ನು ವಿರೋಧಿಸಿ ನಗರದಲ್ಲಿ ರವಿವಾರ ಅಖೀಲ ಕರ್ನಾಟಕ ವಿಜಯಸಿಂಗ್‌ ಅಭಿಮಾನಿಗಳ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಅಧ್ಯಕ್ಷ ಸೂರಜ್‌ ಚಿದ್ರೆ ನೇತೃತ್ವದಲ್ಲಿ ಸದಸ್ಯರು, ಅಭಿಮಾನಿಗಳು ನಗರದ ಪ್ರಮುಖ ರಸ್ತೆಗಳ ಮೂಲಕ ಜಿಲ್ಲಾ ಕಾಂಗ್ರೆಸ್‌ ಕಚೇರಿವರೆಗೆ ರ್ಯಾಲಿ ಮೂಲಕ ತೆರಳಿ, ನಂತರ ಕೆಪಿಸಿಸಿ ಅಧ್ಯಕ್ಷರಿಗೆ ಬರೆದ ಮನವಿ ಪತ್ರವನ್ನು ಸಲ್ಲಿಸಲಾಯಿತು.

ಕಾಂಗ್ರೆಸ್‌ ಪಕ್ಷಕ್ಕೆ ವಿಜಯಸಿಂಗ್‌ ಪರವಾರ ಅಪಾರ ಕೊಡುಗೆ ನೀಡಿದೆ. ತಂದೆ ದಿ. ಧರಂಸಿಂಗ್‌ ಅವರು ಸಚಿವರು, ಮುಖ್ಯಮಂತ್ರಿ ಮತ್ತು ಸಂಸದರಾಗಿ ಜನಪರ ಕೆಲಸ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ಜೊತೆಗೆ ಕೈಜೋಡಿಸಿ, ಈ ಭಾಗಕ್ಕೆ 371(ಜೆ) ಕಲಂ ಜಾರಿಗೆ ಶ್ರಮಿಸಿದ್ದಾರೆ.ಅವರ ಪುತ್ರ ವಿಜಯಸಿಂಗ್‌ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ.
ಎಂಎಲ್‌ಸಿಯಾಗಿ ಔರಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಜಿಪಂ ಸೇರಿ ಸ್ಥಳೀಯ ಸಂಸ್ಥೆಗಳು ಕಾಂಗ್ರೆಸ್‌ ತೆಕ್ಕೆಗೆ ಬರಲು ಕಾರಣರಾಗಿದ್ದಾರೆ. ಎಲ್ಲ ಸಮಾಜದ ಅಭಿವೃದ್ಧಿಗಾಗಿ ಹೋರಾಟ ಮಾಡಿಕೊಂಡು ಬಂದಿರುವ ವಿಜಯಸಿಂಗ್‌ ಅವರು ಧರಂ ಸಿಂಗ್‌ ಫೌಂಡೇಶನ್‌ ಮೂಲಕ ಸಾಮಾಜಿಕ, ಶೈಕ್ಷಣಿಕ ಸೇವೆಗಳನ್ನು ನೀಡಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಎರಡೂ ಬಾರಿ ಎರಡೂ ಬಾರಿ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಅವರನ್ನು ಪಕ್ಷ ಪರಿಗಣಿಸಿಲ್ಲ.

ಈ ಧೋರಣೆಯನ್ನು ಬಿಟ್ಟು ಪಕ್ಷ ನಿಷ್ಠಾವಂತ ಕಾರ್ಯಕರ್ತನಿಗೆ ಒಮ್ಮೆ ಅವಕಾಶ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪ್ರಮುಖರಾದ ವಿಶಾಲ ಹೊನ್ನಾ, ಫಿಲೀಪ್‌ ಜಾನ್‌, ಸೈಯದ್‌ ಖೀಜರ್‌ ಇನ್ನಿತರರು ಭಾಗವಹಿಸಿದ್ದರು.