ವಿಜಯೇಂದ್ರ ಧನ್ಯವಾದ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೨೭:ರಾಜ್ಯಕ್ಕೆ ೩,೪೫೪ ಕೋಟಿ ರೂ. ಬರ ಪರಿಹಾರ ಬಿಡುಗಡೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ಧನ್ಯವಾದ ಹೇಳಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಭೀಕರ ಬರಗಾಲದ ಕರಿ ಛಾಯೆಯಲ್ಲಿ ಸಿಲುಕಿ ನರಳುತ್ತಿದ್ದ ನಮ್ಮ ಅನ್ನದಾತ ರೈತರ ನೆರವಿಗೆ ರಾಜ್ಯಸರ್ಕಾರ ಧಾವಿಸದೆ ತನ್ನ ಕೀಳು ರಾಜಕೀಯ ಮೇಲಾಟ, ಕೆಸರೆರಚಾಟದಲ್ಲಿ ನಿರತವಾಗಿತ್ತು. ಆದರೆ, ಕೇಂದ್ರ ಸರ್ಕಾರ ಅನ್ನದಾತರ ನೆರವಿಗೆ ಧಾವಿಸಿದೆ. ಇದಕ್ಕಾಗಿ ಕರ್ನಾಟಕದ ಸಮಸ್ತ ಜನತೆಯ ಪರವಾಗಿ ಪ್ರಧಾನಿ ನರೇಂದ್ರಮೋದಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ತಾಂತ್ರಿಕ ಅಡಚಣೆ ನಿವಾರಿಸಿ ರಾಜ್ಯದ ಸಂಕಷ್ಟಕ್ಕೆ ಪರಿಹಾರ ಒದಗಿಸಲು ಕೇಂದ್ರಸರ್ಕಾರ ೩,೪೫೪ ಕೋಟಿ ರೂ. ಬಿಡುಗಡೆ ಮಾಡಿದೆ. ಆ ಮೂಲಕ ರಾಜಕೀಯಕ್ಕಿಂತಲೂ ಜನ ಹಿತಕ್ಕೆ ಆದ್ಯತೆ ನೀಡಿ ಕರ್ತವ್ಯ ಪ್ರಜ್ಞೆ ಮೆರೆದಿದೆ ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಹೇಳುತ್ತೇನೆ ಎಂದು ವಿಜಯೇಂದ್ರ ಅವರು ಟ್ವೀಟ್ ಮಾಡಿದ್ದಾರೆ.