ವಿಜಯೇಂದ್ರ ಕ್ಷಮೆ ಕೇಳಲಿ- ಮಾರುತಿರಾವ್ ಬೋಸ್ಲೆ ಲಿಂಗದಳ್ಳಿ


ಸಂಡೂರು: ಮೇ: 3: ಮರಾಠ ಸಮಾಜದ ಮುಖಂಡರು, ಸಚಿವರಾದ ಸಂತೋಷ್ ಲಾಡ್ ಕುರಿತು ವಿಜಯೇಂದ್ರ ಹಗುರ ಮಾತುಗಳನ್ನು ಅಡಿದ್ದಾರೆ ತಕ್ಷಣ ಕ್ಷಮೆ ಕೇಳಬೇಕು ಎಂದು ಸಂಡೂರು ತಾಲೂಕು ಮರಾಠ ಸಮಾಜದ ಅಧ್ಯಕ್ಷ ಮಾರುತಿರಾವ್ ಬೋಸ್ಲೆ ಲಿಂಗದಳ್ಳಿ ಅವರು ಒತ್ತಾಯಿಸಿದರು.
ಅವರು ತಾಲೂಕಿನ ಎಲ್ಲಾ ಮರಾಠ ಸಮಾಜದವರು, ಲಾಡ್ ಅಭಿಮಾನಿಗಳು, ಕಾಂಗ್ರೇಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿ ಪಟ್ಟಣದ ಮುಖ್ಯರಸ್ತೆಯಿಂದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಘೋಷಣೆಗಳನ್ನು ತಹಸೀಲ್ದಾರ್ ಕಛೇರಿವರೆಗೂ ಕೂಗುತ್ತಾ ಬಂದು ಮನವಿಪತ್ರವನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಮಾತನಾಡಿ, ಬರೀ ಸಂತೋಷ್ ಲಾಡ್ ಅವರಿಗೆ ಮಾಡಿದ ಅವಮಾನವಲ್ಲ ಮರಾಠರಿಗೆ ಮಾಡಿದ ಅವಮಾನವಾಗಿದ್ದು ತಕ್ಷಣ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ರಾಘವೇಂದ್ರ ಕ್ಷಮೆ ಕೇಳಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಛತ್ರಿಕಿ ಸತೀಶ್ ಮಾತನಾಡಿ, ವಿಜಯೇಂದ್ರ ಮಾಧ್ಯಮದವರ ಮುಂದೆ ಸಚಿವ ಸಂತೋಷ ಲಾಡ್ ಬಗ್ಗೆ ತೀರಾ ಹಗುರವಾಗಿ ಮಾತನಾಡಿದ್ದಾರೆ, ಇದು ಖಂಡನೀಯ. ಸಂತೋಷ ಲಾಡ್ ಒಬ್ಬ ಸಚಿವ ಹಾಗೂ ಮರಾಠಾ ಸಮಾಜದ ಮುಖಂಡರು. ಬಿಜೆಪಿಯ ಅಧ್ಯಕ್ಷ ಮರಾಠಾ ಸಮಾಜದ ಹಿರಿಯರಿಗೆ ಈ ರೀತಿ ಅವಾಚ್ಯ ಶಬ್ದದಿಂದ ನಿಂದಿಸಿದ್ದು ಇಡೀ ಮರಾಠಾ ಸಮಾಜಕ್ಕೆ ಅವಮಾನ ಮಾಡಿದ ಹಾಗೆ. ಮತ್ತು ಇಡೀ ಬಿಜೆಪಿ ಸಮುದಾಯವೇ ಮರಾಠಾ ಸಮುದಾಯಕ್ಕೆ ವಿರುದ್ಧ ಇದ್ದ ಹಾಗೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಸಂತೋಷ ಲಾಡ್ ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಒಮ್ಮೆ ಬಂದು ಜನರ ಅಭಿಪ್ರಾಯ ಆಲಿಸಿದರೆ, ಅವರು ಮಾಡುತ್ತಿರುವ ಜನ ಸೇವೆ ನಿಮಗೆ ಗೊತ್ತಾಗುತ್ತದೆ. ಸರ್ಕಾರದಿಂದ ಸಿಗುತ್ತಿರುವ ಅನುದಾನಗಳನ್ನು ಮೀರಿ ತಮ್ಮ ಸ್ವಂತ ಹಣದಲ್ಲಿ ಯಾವ ಯಾವ ರೀತಿಯಲ್ಲಿ ಜನರ ಅವಶ್ಯಕತೆಗಳನ್ನು ಪೂರೈಸುತ್ತಿದ್ದಾರೆ ಎಂಬುದು ನಿಮಗೆ ಅರ್ಥವಾಗುತ್ತದೆ ಎಂದು ತಿಳಿಸಿದರು, ಪ್ರಕೃತಿ ವಿಕೋಪದಿಂದ ಬೇರೆ ಬೇರೆ ಸ್ಥಳಗಳಲ್ಲಿ ರಾಜ್ಯದ ಜನರು ಸಂಕಷ್ಟದಲ್ಲಿ ಸಿಲುಕಿದಾಗ ಸರ್ಕಾರದ ಪ್ರತಿನಿಧಿಯಾಗಿ ಕನ್ನಡಿಗರನ್ನು ಸುರಕ್ಷಿತವಾಗಿ ತವರು ನಾಡಿಗೆ ಕರೆತಂದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದೆ ಇವೆ. ಮಕ್ಕಳು ಸಂಸ್ಕಾರವಂತರಾಗಬೇಕಾದರೆ, ತಂದೆ ತಾಯಿಯ ಪಾತ್ರ ಬಹು ಮುಖ್ಯ. ವಿಜಯೇಂದ್ರಗೆ ತಂದೆ- ತಾಯಿಯ ಕಡೆಯಿಂದ ಸಂಸ್ಕಾರ ಸಿಕ್ಕಿಲ್ಲ ಅನಿಸುತ್ತದೆ. ರಾಜ್ಯದ ಮುಖ್ಯಮಂತ್ರಿಯಾಗಿದ್ದ, ಸಾಕಷ್ಟು ವಸಂತಗಳನ್ನು ಪೂರೈಸಿದ ಯಡಿಯೂರಪ್ಪ ಕ್ಷಮೆ ಕೇಳಬೇಕು ಎಂದರು.
ಈ ಸಂದರ್ಭದಲ್ಲಿ ದಲಿತ ಸಂಘದ ಮುಖಂಡ ಎಲ್.ಹೆಚ್. ಶಿವಕುಮಾರ ಮಾತನಾಡಿ ಭಾರತ ಮಾತೆ ಎಲ್ಲ ಧರ್ಮ, ಎಲ್ಲ ಜಾತಿಯವರನ್ನು ತನ್ನ ಮಕ್ಕಳಂತೆ ಉದರದಲ್ಲಿ ಇಟ್ಟುಕೊಂಡು ರಕ್ಷಣೆ ಮಾಡುತ್ತಿರುವಾಗ ಇಂಥ ದುಷ್ಟರಿಂದ ಪ್ರಮಾದವಾಗುತ್ತಿದೆ. ಬಾಯಿ ತೆಗೆದರೆ ಸಾಕು, ಜಾತಿ -ಧರ್ಮ ಒಡೆದು ಚೂರು ಚೂರು ಮಾಡುವ ಮಾತುಗಳೇ ಹೊರಬರುತ್ತವೆ. ಜವಾಬ್ದಾರಿ ಸ್ಥಾನದಲ್ಲಿರುವವರು ಯೋಚನೆ ಮಾಡಿ ಅಳೆದು ತೂಗಿ ಮಾತನಾಡಬೇಕು. ನಾಡಿನ ಪ್ರತಿಯೊಬ್ಬರ ಪ್ರತಿನಿಧಿಯಾಗಬೇಕೇ ಹೊರತು ಯಾವುದೇ ಒಂದು ಸಮುದಾಯವನ್ನು ಹೀಯಾಳಿಸುವಂತವರಾಗಬಾರದು ಎಂದರು.
ಮರಾಠ ಸಮಾಜದ ಅಧ್ಯಕ್ಷರಾದ ಮಾರುತಿ ರಾವ್ ಶಿಂದೇ, ಸತ್ಯನಾರಾಯಣ ಮಾಸ್ತಿ, ರಾಮಕೃಷ್ಣ ಹೆಗಡೆ ಮಾತನಾಡಿದರು, ಪಿ. ಜಯರಾಮ್, ವಾಲ್ಮೀಕಿ ಸಮಾಜದ ಮುಖಂಡರಾದ ವಸಂತ್ ಕುಮಾರ್,ದಲಿತ ಸಂಘದ ಎಲ್ ಎಚ್ ಶಿವಕುಮಾರ್, ಕುರುಬ ಸಮಾಜದ ಮುಖಂಡರಾದ ಸತ್ಯಪ್ಪ, ಸಾಧನ ಬೊಹಿಟೆ, ಅಶೋಕ್, ವೆಂಕಟೇಶ್, ವೀರೇಶ್ ಶಿಂದೇ, ಸುರೇಶ್, ಸೋಮಪ್ಪ ಮಲ್ಲಿಕಾರ್ಜುನ, ಘಂಟಿ ಕುಮಾರಸ್ವಾಮಿ, ಪ್ರಶಾಂತ್, ಛತ್ರಿಕಿ ಮಹಾಬಲಿ, ಗಡಾದ್ ರಮೇಶ್, ಸೇರಿದಂತೆ ಕಾಂಗ್ರೇಸ್ ಪುರಸಭೆ ಸದಸ್ಯರು ಉಪಸ್ಥಿತರಿದ್ದರು ತಹಶೀಲ್ದಾರ್ ಅನಿಲ್ ಕುಮಾರ ಅವರಿಗೆ ಮನವಿ ಪತ್ರ ಸಲ್ಲಿಸಿದರು.