ವಿಜಯಾ ಆಸ್ಪತ್ರೆ ರದ್ದತಿಗೆ ಸಂತ್ರಸ್ತರ ಆಗ್ರಹ

ಬೀದರ್: ಮಾ.1:ಐ.ವಿ.ಎಫ್ ಹೆಸರಲ್ಲಿ ಲಕ್ಷಾವಧಿ ಹಣ ಲಪಟಾಯಿಸಿ ರೋಗಿಗಳಿಗೆ ಪಂಗನಾಮ ಹಾಕುತ್ತಿರುವ ವಿಜಯಾ ಆಸ್ಪತ್ರೆಯನ್ನು ಬಂದ್ ಮಾಡಬೇಕೆಂದು ಸಂತ್ರಸ್ತೆ ವಂದನಾ ನಾಗರಾಜ ಒತ್ತಾಯಿಸಿದ್ದಾರೆ.
ಗುರುವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿಜಯಾ ಆಸ್ಪತ್ರೆಯ ಜಾಹಿರಾತು ಫಲಕ ನೋಡಿ, ಎಲ್ಲೆಡೆ ಪ್ರಚಾರ ಸಾಮಗ್ರಿ ನೋಡಿ ಇಲ್ಲಿ ಪರಿಣಾಮಕಾರಿ ಐ.ವಿ.ಎಫ್ ಚಿಕಿತ್ಸೆ ಸಿಗಬಹುದೆಂಬ ಸದಾಶಯದಿಂದ ನನ್ನ ಪತಿ ನಾಗರಾಜ ಅವರೊಂದಿಗೆ ಆಸ್ಪತ್ರೆಗೆ ತೆರಳಿದೆ. ರು.16,800 ನ 15 ಚುಚ್ಚು ಮದ್ದು ಪಡೆಯಬೇಕು ಎ<ಂದಾಗ ಅದನ್ನು ಒಪ್ಪಿಕೊಂಡು 15 ಚುಚ್ಚುಮದ್ದು ಪಡೆದಿರುವೆ. ಡಾ.ವಿಜಯಾ ಹತ್ತಿ ಸ್ವತಃ ಒಂದು ಸಾರಿ ಆದರೂ ಕೈ ಮುಟ್ಟಿ ನೋಡಲಿಲ್ಲ. ವಿಪರಿತ ರಕ್ತಶ್ರಾವ ಆಗುತ್ತಿದೆ. ಚಿಕಿತ್ಸೆ ನೀಡಿ ಎಂದಾಗ ಮಾನಸಿಕ ಒತ್ತಡದಿಂದ ಹೀಗೆ ಆಗುತ್ತಿದೆ. ಕೋರ್ಸ್ ಮುಕ್ತಾಯಗೊಳಿಸುವ ವರೆಗೆ ಚಿಕಿತ್ಸೆ ಪಡೆಯಲೇಬೇಕೆಂದು ಹೇಳಿ ನಮ್ಮಿಂದ ಸುಮಾರು 8 ಲಕ್ಷ ವರೆಗೆ ಹಣ ಲಪಟಾಯಿಸಿದ್ದಾರೆ. ಇವರ ಚಿಕಿತ್ಸೆಯಿಂದ ನನಗೆ ಈಗ ಎಲ್ಲವೂ ಎರಡೆರಡು ಕಾಣುತ್ತಿದ್ದು, ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ನಾವು ಈಗ ತುಂಬ ನಿಶಕ್ತಳಾಗಿರುವೆ. ಐ.ವಿ.ಎಫ್ ಫೇಲ್ ಆದರೆ ನಮ್ಮ ಹಣ ಹಿಂದುರಿಗಿಸಿ ಎಂದಾಗ ನಮ್ಮಲ್ಲಿ ವಕೀಲರಿದ್ದಾರೆ, ಪೋಲಿಸರು ಇದ್ದಾರೆ, ಪತ್ರಕರ್ತರು ನಮ್ಮವರಿದ್ದಾರೆ. ಹೆಚ್ಚು ಮಾತನಾಡದೇ ಹೊರಡಿ ಎಂದು ಧಮಕಿ ಹಾಕುತ್ತಿರುವರು. ಇಂಥ ಜೀವ ಬೆದರಿಕೆ, ಬೇಜವಾಬ್ದಾರಿ ಹೇಳಿಕೆ ವಿರೂದ್ಧ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿಗಳಿಗೆ ಲಿಖಿತ ದೂರು ಸಹ ನೀಡಲಾಗಿದೆ ಎಂದು ತಿಳಿಸಿದ ಅವರು ನಮಗೆ ಬಂದೊದಗಿರುವ ದುಸ್ಥಿತಿ ಇನ್ಯಾರಿಗೂ ಬರಬಾರದೆಂದು ವಂದನಾ ಹೇಳಿದರು.
ಜಹಿರಾಬಾದ್‍ನ ಕವಿತಾ ಕಿಶನ್ ರಾಠೋಡ ಮಾತನಾಡಿ, ನಾನು ಅನಕ್ಷರಸ್ತೆ ಎಂಬುದನ್ನು ಮನಗಂಡು ನನ್ನ ಬಳಿ ಸಹ ಆರೇಳು ಲಕ್ಷ ಲಪಟಾಯಿಸಿದ್ದಾರೆ. ಯಾವುದೇ ಯಶಸಸ್ವಿ ಚಿಕಿತ್ಸೆ ಆಗದೇ ಹಣವೂ ಹೊಯಿತು, ಶರೀರವು ಹಾಳಾಯಿತು. ಮಕ್ಕಳು ಆಗುತ್ತವೆ ಎಂದು ನಂಬಿ ತೆಲಂಗಾಣದಿಂದ ಇಲ್ಲಿಗೆ ಬಂದು ಚಿಕಿತ್ಸೆ ಪಡೆದರೂ ಯಾವುದೇ ಪ್ರಯೋಜನ ಆಗಲಿಲ್ಲ. ಒಂದು ಬಾರಿ ನಮ್ಮ ಮಾವನವರ ಪುಣ್ಯತಿಥಿ ಇದ್ದರೂ ಸಹ ಇಲ್ಲಿಗೆ ಬಂದು ಚಿಕಿತ್ಸೆ ಪಡೆದೆ. ಏನು ಪ್ರಯೋಜನ ಆಗಲಿಲ್ಲ ಎಂದು ತಮ್ಮ ಅಳಲು ತೋಡಿಕೊಂಡ ಅವರು, ನಮಗಾದ ಈ ಸ್ಥಿತಿ ಬೇರೆಯವರಿಗೆ ಬರಬಾರದೆಂದರೆ ಕೂಡಲೇ ಸರ್ಕಾರ ಹಾಗೂ ಜಿಲ್ಲಾಡಳಿತ ಈ ಆಸ್ಪತ್ರೆಯನ್ನು ಸೀಜ್ ಮಾಡಬೇಕೆಂದು ಆಗ್ರಹಿಸಿದರು. ಇನ್ನೋರ್ವ ಸಂತ್ರಸ್ತೆ ಸೀಮಾ ಬೇಗಮ್ ಸಹ ತಮ್ಮೊಂದಿಗಾದ ಅನ್ಯಾಯವನ್ನು ಹಂಚಿಕೊಂಡರು. ವಂದನಾ ಪತಿ ನಾಗರಾಜ, ಸೀಮಾ ಬೇಗಮ್ ಪತಿ ಸಯ್ಯದ್ ಅಲಿ ಪತ್ರಿಕಾ ಗೋಷ್ಟಿಯಲ್ಲಿ ಉಪಸ್ಥಿತರಿದ್ದರು.