ವಿಜಯಪುರ: 8 ವಿಧಾನಸಭಾ ಕ್ಷೇತ್ರಗಳಲ್ಲಿ ಪಿಆರ್‍ಒ, ಎಪಿಆರ್‍ಒ ಅಧಿಕಾರಿಗಳಿಗೆ ತರಬೇತಿ

ವಿಜಯಪುರ, ಏ.17: ಚುನಾವಣಾ ಆಯೋಗದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸುವಂತೆಯೂ ಹಾಗೂ ನಿಯಮಿತವಾಗಿ ನೀಡುವ ತರಬೇತಿ ಸದುಪಯೋಗಪಡಿಸಿಕೊಂಡು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಮತದಾನ ಕೇಂದ್ರದಲ್ಲಿ ಹಿರಿಯ ನಾಗರಿಕರಿಗೆ ಹಾಗೂ ವಿಕಲಚೇತನರಿಗೆ ವಿಶೇಷ ಆದ್ಯತೆ ನೀಡಬೇಕು. ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸರತಿ ಸಾಲಿನಲ್ಲಿ ಬಂದು ಸುಸೂತ್ರವಾಗಿ ಮತದಾನ ಮಾಡುವತ್ತ ಗಮನ ಹರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಅವರು ಭಾನುವಾರ ಜಿಲ್ಲೆಯ ಮುದ್ದೇಬಿಹಾಳ ಹಾಗೂ ಬ.ಬಾಗೇವಾಡಿ ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಪಿಆರ್‍ಒ ಹಾಗೂ ಎಪಿಆರ್‍ಒಗಾಗಿ ಹಮ್ಮಿಕೊಂಡಿದ್ದ, ತರಬೇತಿಯ ಕುರಿತು ಅಗತ್ಯ ಸಲಹೆ ಸೂಚನೆ ನೀಡಿದರು.
ಈ ಚುನಾವಣೆಯಲ್ಲಿ ಪಿಆರ್.ಓ ಹಾಗೂ ಎಪಿಆರ್‍ಓ ಅಧಿಕಾರಿಗಳ ಜವಾಬ್ದಾರಿ ಮಹತ್ತರವಾಗಿದೆ. ವಿದ್ಯುನ್ಮಾನ ಮತಯಂತ್ರ, ಅಣುಕು ಮತದಾನ, ವಿವಿಪ್ಯಾಟ್ ಬಳಕೆ, ಇವಿಎಂ ಸಲಕರಣೆಗಳ ಬಳಕೆ ಜವಾಬ್ದಾರಿ, ಮತಗಟ್ಟೆಯಲ್ಲಿ ಪೂರ್ವ ಸಿದ್ಧತೆ, ವಿಶೇಷಚೇತನರಿಗೆ, ಮಹಿಳೆಯರಿಗೆ ಸೂಕ್ತ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ಸೌಲಭ್ಯ ಕಲ್ಪಿಸಬೇಕು. ಜಿಲ್ಲೆಯಲ್ಲಿ ಶಾಂತಿಯುತವಾಗಿ, ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಚುನಾವಣೆ ಜರುಗುವಂತೆ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ವಹಿಸಿ ಜವಾಬ್ದಾರಿಯುತವಾಗಿ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.
ಮತಗಟ್ಟೆ ಅಧಿಕಾರಿಗಳಿಗೆ ಚುನಾವಣೆಯ ಮಹತ್ವದ ಕುರಿತು ಸಲಹೆ ನೀಡಿದರು. ಈ ತರಬೇತಿಯಲ್ಲಿ ವಿಷಯಗಳನ್ನು ಮನದಟ್ಟು ಮಾಡಿಕೊಂಡು ಯಾವುದೇ ಲೋಪವಾಗದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.
ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನೇಮಕಗೊಂಡಿರುವ ಪ್ರಿಸೈಡಿಂಗ್ ಮತ್ತು ಸಹಾಯಕ ಪ್ರಿಸೈಡಿಂಗ್ ಅಧಿಕಾರಿಗಳಿಗೆ ತರಬೇತಿಯನ್ನು 26-ಮುದ್ದೇಬಿಹಾಳ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಮುದ್ದೇಬಿಹಾಳದ ಎಂ.ಜಿ.ಇ.ಸಿ. ಕಾಲೇಜ್‍ನಲ್ಲಿ ಹಾಗೂ 27-ದೇವರ ದೇವರಹಿಪ್ಪರಗಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ದೇವರಹಿಪ್ಪರಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಇಂಗ್ಲೀಷ್ ಮಿಡಿಯಂ ಹೈಸ್ಕೂಲ್‍ನಲ್ಲಿ, 28-ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಬಸವನಬಾಗೇವಾಡಿ ಶ್ರೀ ಬಸವೇಶ್ವರ ಸರಕಾರಿ ಪದವಿಪೂರ್ವ ಕಾಲೇಜ್, ಹಾಗೂ 29-ಬಬಲೇಶ್ವರ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಬಬಲೇಶ್ವರದ ಶ್ರೀ ಶಾಂತವೀರ ಪದವಿಪೂರ್ವ ಕಾಲೇಜ್‍ನಲ್ಲಿ ತರಬೇತಿ ನಡೆಯಿತು.
30-ಬಿಜಾಪುರ ನಗರ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ವಿಜಯಪುರ ನಗರದ ವಿ.ಬಿ.ದರಬಾರ ಪದವಿಪೂರ್ವ ಮತ್ತು ಪ್ರೌಢಶಾಲೆ ಹಾಗೂ 31-ನಾಗಠಾಣ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ವಿಜಯಪುರದ ಪಿಡಿಜೆ ಪದವಿಪೂರ್ವ ಮತ್ತು ಪ್ರೌಢಶಾಲೆಯಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿತ್ತು.
32-ಇಂಡಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಇಂಡಿ ಸರಕಾರಿ ಆದರ್ಶ ವಿದ್ಯಾಲಯ(ಆರ್‍ಎಂಎಸ್‍ಎ) ಹಾಗೂ 33-ಸಿಂದಗಿ ಮತಕ್ಷೇತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸಿಂದಗಿಯ ಆರ್.ಡಿ.ಪಾಟೀಲ & ಪಿ.ಬಿ.ಪೋರವಾಲ ಕಾಲೇಜ್‍ನಲ್ಲಿ ತರಬೇತಿ ಜರುಗಿತು.
ಈ ಸಂದರ್ಭದಲ್ಲಿ ವಿವಿಧ ಮತಕ್ಷೇತ್ರದ ನಿರ್ವಾಚಣಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಚಂದ್ರಕಾಂತ ಪವಾರ, ಡಾ.ದುರಗೇಶ, ರಾಮಚಂದ್ರ ಗಡದೆ, ಸಿದ್ರಾಮ ಮಾರಿಹಾಳ, ಭೀಮಪ್ಪ ಕೆ. ಲಾಲಿ ಸೇರಿದಂತೆ ಸಹಾಯಕ ಚುನಾವಣಾಧಿಕಾರಿಗಳು ಉಪಸ್ಥಿತರಿದ್ದರು.