ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್- ಬಿಜೆಪಿ ನೇರ ಹಣಾಹಣಿಕಾಂಗ್ರೆಸ್ಸೋ? ಬಿಜೆಪಿಯೋ? ಎಂದು ತೀವ್ರಗೊಂಡ ಕುತೂಹಲ

(ರುದ್ರಪ್ಪ ಆಸಂಗಿ)
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.5:ಮೇ 7ರಂದು ನಡೆಯಲಿರುವ ವಿಜಯಪುರ ಎಸ್.ಸಿ ಮೀಸಲು ಲೋಕಸಭೆ ಕ್ಷೇತ್ರದ ಎರಡನೆ ಹಂತದ ಚುನಾವಣೆ ಕಾವು ಗುಮ್ಮಟ ನಗರಿ ವಿಜಯಪುರದಲ್ಲಿ ಬಿಸಿಲಿನ ತಾಪಮಾನ ಮೀರಿ ದಿನೇ ದಿನೇ ಏರುತ್ತಲೇ ನಡೆದಿದ್ದು, ಕಾಂಗ್ರೆಸ್- ಬಿಜೆಪಿ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಈ ಬಾರಿಯ ಗೆಲವು ಯಾರದು ಎಂಬ ಕುತೂಹಲ ಎಲ್ಲರಲ್ಲೂ ತೀವ್ರವಾಗಿದೆ.
ಚುನಾವಣೆ ಅಖಾಢದಲ್ಲಿ 8 ಜನ ಅಭ್ಯರ್ಥಿಗಳಿದ್ದರೂ ಸಹ ಕಾಂಗ್ತೆಸ್- ಬಿಜೆಪಿ ನಡುವೆ ಫೈಟ್ ಜೋರಾಗಿದೆ. ದಲಿತ ಸಮುದಾಯದ ಎಡಗೈನ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮೂರು ಬಾರಿ ಲೋಕಸಭೆಗೆ ಆಯ್ಕೆಯಾಗಿ ಈಗ ಮತ್ತೆ ನಾಲ್ಕನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ದಲಿತ ಸಮಾಜದ ಬಲಗೈನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜು ಆಲಗೂರ ಎರಡು ಬಾರಿ ನಾಗಠಾಣ ವಿಧಾನಸಭೆ ಮೀಸಲು ಕ್ಷೇತ್ರದಲ್ಲಿ ಗೆಲವು ಸಾಧಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಇದೇ ಮೊದಲ ಬಾರಿಗೆ ಲೋಕಸಭೆ ಚುನಾವಣೆ ಅಖಾಢಕ್ಕಿಳಿದು ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿತ್ತು. ಈ ಬಾರಿ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಏರ್ಪಟ್ಟಿದ್ದು, ಮೈತಿಕೂಟದ ಅಭ್ಯರ್ಥಿ ಬಿಜೆಪಿಯ ರಮೇಶ ಜಿಗಜಿಣಗಿಗೆ ಟಿಕೆಟ್ ದಕ್ಕಿದೆ. ಹೀಗಾಗಿ ಕಾಂಗ್ರೆಸ್- ಬಿಜೆಪಿ ಮಧ್ಯೆ ತುರುಸಿನ ಚುನಾವಣೆ ನಡೆದಿದೆ. ಕಾಂಗ್ರೆಸ್ ಗೆಲುವಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಟೊಂಕ ಕಟ್ಟಿ ನಿಂತಿದ್ದಾರೆ. ಎಲ್ಲ ಆರು ಕ್ಷೇತ್ರಗಳ ಕಾಂಗ್ರೆಸ್ ಶಾಸಕರು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಗೆಲವಿಗೆ ಹಾವು- ಮುಂಗಸಿಯಂತೆ ಕಚ್ಚಾಡುತ್ತಿದ್ದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮತ್ತು ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಂiÀiತ್ನಾಳ ಒಂದಾಗಿದ್ದಾರೆ. ಜಿಗಜಿಣಗಿ ಪರ ಶಾಸಕ ಯತ್ನಾಳ ಪ್ರಚಾರ ನಡೆಸುತ್ತಿದ್ದಾರೆ. ಕಾಂಗ್ರೆಸ್- ಬಿಜೆಪಿ ನಾಯಕರುಗಳು ಭಿನ್ನಮತ ಮರೆತು ಒಂದಾಗಿದ್ದಾರೆ. ಒಂದೇ ವೇದಿಕೆಯಲ್ಲಿ ಕಾಂಗ್ರೆಸ್ಸಿಗರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಇದರಿಂದಾಗಿ ಈ ಚುನಾವಣೆಯಲ್ಲಿ ಎರಡು ಪಕ್ಷಗಳಲ್ಲಿ ಜಿದ್ದಾಜಿದ್ದಿ ಜೋರಾಗಿದೆ.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಮೋದಿ ಮುಖ ನೋಡಿ ಓಟು ಹಾಕುವಂತೆ ಮತದಾರರ ಮನವೊಲಿಸುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ಪಂಚ ಗ್ಯಾರಂಟಿ ಜೊತೆಗೆ ತಮ್ಮದೇಯಾದ 10 ಅಂಶಗಳ ವಿಜಯಪುರ ವಿಜಿನ್ ಮತದಾರರ ಮುಂದಿಟ್ಟು ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಮತದಾರ ಯಾರಿಗೆ ಮಣಿ ಹಾಕುತ್ತಾನೆ ಎಂಬುವುದು ನಿಗೂಢವಾಗಿದೆ.
ರಮೇಶ ಜಿಗಜಿಣಗಿ (ಬಿಜೆಪಿ), ರಾಜು ಆಲಗೂರ (ಕಾಂಗ್ರೆಸ್), ಗಣಪತಿ ರಾಠೋಡ (ಕರ್ನಾಟಕ ರಾಷ್ಟ್ರ ಸಮಿತಿ), ಜಿತೇಂದ್ರ ಕಾಂಬಳೆ (ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ), ನಾಗಜ್ಯೋತಿ ಬಿ.ಎನ್. (ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ), ರಾಜಕುಮಾರ ಹೊನ್ನಕಟ್ಟಿ (ರಾಷ್ಟ್ರೀಯ ಸಮಾಜ ಪಕ್ಷ), ರಾಮಜಿ ಹರಿಜನ (ನಕಿ ಭಾರತೀಯ ಏಕತಾ ಪಕ್ಷ), ತಾರಾಬಾಯಿ ಬೋವಿ (ಪಕ್ಷೇತರ) ಸೇರಿ ಒಟ್ಟು 8 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳಲ್ಲಿ ಬಬಲೇಶ್ವರ, ಬಸವನ ಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ, ನಾಗಠಾಣ ಮೀಸಲು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಈ ಶಾಸಕರ ಪೈಕಿ ಇಬ್ಬರು ಸಚಿವರಿದ್ದಾರೆ. ವಿಜಯಪುರ ಕ್ಷೇತ್ರದಲ್ಲಿ ಬಿಜೆಪಿ, ದೇವರ ಹಿಪ್ಪರಗಿ ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದಾರೆ.
19,31 ಲಕ್ಷ ಮತದಾರರು
ಜಿಲ್ಲೆಯಲ್ಲಿ ಒಟ್ಟು 19,31,342 ಒಟ್ಟು ಮತದಾರರು ಇದ್ದಾರೆ. ಪುರುಷರು 9,81,251 ಹಾಗೂ ಮಹಿಳೆಯರು 9,49,885 ಹಾಗೂ 206 ಇತರೆ ಮತದಾರರಿದ್ದಾರೆ.
ಈ ಕ್ಷೇತ್ರದಲ್ಲಿ ಪಂಚಮಸಾಲಿ, ರೆಡ್ಡಿ, ಗಾಣಿಗ, ಬಣಜಿಗ ಮತದಾರರು ಸೇರಿ ಒಟ್ಟು 7 ಲಕ್ಷ ಇದ್ದಾರೆ. ಈ ಮತದಾರರೆ ಇಲ್ಲಿ ನಿರ್ಣಾಯಕರಾಗಿದ್ದಾರೆ.