ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರ: ಮತ್ತೆ ಅರಳಿದ ಕಮಲ77229 ಮತಗಳ ಅಂತರದಿಂದ ರಮೇಶ ಜಿಗಜಿಣಗಿಗೆ ಭರ್ಜರಿ ಗೆಲುವು, ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರಗೆ ಸೋಲು

ವಿಜಯಪುರ,ಜೂ.5 : ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ರಮೇಶ ಜಿಗಜಿಣಗಿ ಸತತ ನಾಲ್ಕನೇ ಬಾರಿ ಗೆದ್ದು ಮತ್ತೆ ಲೋಕಸಭೆ ಪ್ರವೇಶಿಸಿದ್ದಾರೆ. ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರನ್ನು 77,229 ಮತಗಳ ಅಂತರದಿಂದ ಸೋಲಿಸುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ.
ರಮೇಶ ಜಿಗಜಿಣಗಿ 6,72,781 ಮತಗಳನ್ನು ಪಡೆದರೆ, ಕಾಂಗ್ರೆಸ್ ಪಕ್ಷದ ರಾಜು ಆಲಗೂರ 5,95,557 ಮತಗಳನ್ನು ಪಡೆದುಕೊಂಡರು.
ಕೆಆರ್‍ಎಸ್ ಪಕ್ಷದ ಅಭ್ಯರ್ಥಿ ಗಣಪತಿ ರಾಠೋಡ ಹಂಜಗಿ ಅವರಿಗೆ 7691, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಅಭ್ಯರ್ಥಿ ಜಿತೇಂದ್ರ ಕಾಂಬಳೆ ಅವರಿಗೆ 1623, ಎಸ್‍ಯುಸಿಐ ಪಕ್ಷದ ಅಭ್ಯರ್ಥಿ ನಾಗಜ್ಯೋತಿ ಡಿ.ಎಂ. ಅವರಿಗೆ 2392, ರಾಷ್ಟೀಯ ಸಮಾಜ ಪಕ್ಷದ ಅಭ್ಯರ್ಥಿ ರಾಜಕುಮಾರ ಅಪ್ಪಣ್ಣ ಹೊನಕಟ್ಟಿ ಅವರಿಗೆ 1794, ನಕಿ ಭಾರತೀಯ ಏಕತಾ ಪಾರ್ಟಿ ಅಭ್ಯರ್ಥಿ ರಾಮಜಿ ಯಮನಪ್ಪ ಬುದ್ಧಪ್ರಿಯಾ ಅವರಿಗೆ 2426, ಪಕ್ಷೇತರ ಅಭ್ಯರ್ಥಿ ಭೋವಿ ತಾರಾಬಾಯಿ 4353 ಮತಗಳನ್ನು ಪಡೆದುಕೊಂಡಿದ್ದಾರೆ.
ಒಟ್ಟು 22 ಸುತ್ತುಗಳಲ್ಲಿ ಮತ ಎಣಿಕೆ ನಡೆದಿದ್ದು, ಮೊದಲ ಸುತ್ತಿನಲ್ಲಿಯೇ ಮುನ್ನಡೆ ಪಡೆದು ಪ್ರತಿಯೊಂದು ಸುತ್ತಿನಲ್ಲಿ ಜಿಗಜಿಣಗಿ ಅವರು ಮುನ್ನಡೆ ಕಾಯ್ದುಕೊಂಡರು. ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‍ನ ಅಭ್ಯರ್ಥಿ ರಾಜು ಆಲಗೂರ ಕೊನೆಯ ಹಂತದ ಮತ ಎಣಿಕೆವರೆಗೂ ಮುನ್ನಡೆ ಕಾಯ್ದುಕೊಳ್ಳಲಿಲ್ಲ. ಗೆಲುವಿನ ಅಂತರ ಸುತ್ತಿನಿಂದ ಸುತ್ತಿಗೆ ಹೆಚ್ಚುತ್ತಲೇ ಇತ್ತು.

ಅಂಚೆ ಮತದಲ್ಲೂ ಬಿಜೆಪಿ ಮೇಲುಗೈ
ಅಂಚೆ ಮತದಾನದಲ್ಲೂ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರೇ ಅತ್ಯಧಿಕ ಅಂದರೆ 3726 ಮತಗಳನ್ನು ಪಡೆದುಕೊಂಡರು. ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ಪ್ರೊ.ರಾಜು ಆಲಗೂರ 2275, ಗಣಪತಿ ರಾಠೋಡ 39, ಜಿತೇಂದ್ರ ಕಾಂಬಳೆ 18, ನಾಗಜ್ಯೋತಿ 17, ರಾಜಕುಮಾರ ಹೊನಕಟ್ಟಿ 10, ರಾಮಜಿ ಯಮನಪ್ಪ ಅವರಿಗೆ 12 ಹಾಗೂ ತಾರಾಬಾಯಿ ಭೋವಿ ಅವರಿಗೆ 11 ಹಾಗೂ ನೋಟಾಕ್ಕೆ 20 ಮತಗಳು ಚಲಾವಣೆಯಾಗಿದ್ದು, ಅಂಚೆ ಮತದಾನದಲ್ಲಿ 959 ಮತಗಳು ತಿರಸ್ಕøತವಾಗಿವೆ.

ನೋಟಾ 7502
ಪ್ರಸ್ತುತ ಚುನಾವಣೆಯಲ್ಲಿ ನೋಟಾಕ್ಕೂ ಸಹ ಅತ್ಯಧಿಕ ಪ್ರಮಾಣದಲ್ಲಿ ಮತ ಚಲಾವಣೆಯಾಗಿದ್ದು, ಒಟ್ಟು 7502 ನೋಟಾ ಮತಗಳು ಚಲಾವಣೆಯಾಗಿವೆ.
ಪ್ರಸಕ್ತ ಚುನಾವಣೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಶೇ.66.32 ರಷ್ಟು ಮತದಾನವಾಗಿತ್ತು. ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1946090 ಮತದಾರರಿದ್ದು ಈ ಪೈಕಿ 12,96,114 ಮತದಾರರು ಮತಚಲಾಯಿಸಿದ್ದಾರೆ.