ವಿಜಯಪುರ ಮತಯಂತ್ರ ಪುಡಿ ಪುಡಿ

ವಿಜಯಪುರ,ಮೇ.೧೦-ಮತದಾನ ಪ್ರಕ್ರಿಯೆಯನ್ನು ಅರ್ಧಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ರೊಚ್ಚಿಗೆದ್ದ ಜಿಲ್ಲೆಯ ಮಸಬಿನಾಳ ಗ್ರಾಮಸ್ಥರು ಮತ ಯಂತ್ರಗಳನ್ನೇ ಪುಡಿ ಪುಡಿ ಮಾಡಿದ ಘಟನೆ ಇಂದು ನಡೆಯಿತು.
ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಇಂದು ಬೆಳಿಗ್ಗೆ ೭ ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಆರಂಭವಾಗಿತ್ತು. ಮಸಬಿನಾಳ ಗ್ರಾಮದಿಂದ ಡೋಣೂರು ಗ್ರಾಮಕ್ಕೆ ಮತ ಯಂತ್ರಗಳನ್ನು ಸಾಗಿಸಲಾಗುತ್ತಿತ್ತು. ಆದರೆ, ಗ್ರಾಮಸ್ಥರು ಗ್ರಾಮದಲ್ಲಿ ಮತದಾನವನ್ನು ಅರ್ಧಕ್ಕೆ ಸ್ಥಗಿತಗೊಳಿಸಿ ಕೊಂಡ್ಯೂಯುತ್ತಿದ್ದಾರೆ ಎಂದು ಆರೋಪಿಸಿ ಚುನಾವಣಾ ಅಧಿಕಾರಿಗಳ ತೆರಳುತ್ತಿದ್ದ ಕಾರ್‌ನ್ನೇ ಪಲ್ಟಿ ಮಾಡಿ ಅವರ ಮೇಲೆ ಹಲ್ಲೆಯನ್ನು ಮಾಡಿದ್ದಾರೆ. ನಂತರ ವಾಹನದಲ್ಲಿದ್ದ ಮತಯಂತ್ರಗಳನ್ನು ಒಡೆದು ಹಾಕಿ ಪುಡಿ ಪುಡಿ ಮಾಡಿದ್ದಾರೆ.

ಮತಗಟ್ಟೆ ಪರಿಶೀಲನೆ ಸೋಮಣ್ಣಗೆ ಅಡ್ಡಿ
ಮತ್ತೊಂದು ಪ್ರಕರಣದಲ್ಲಿ ಮೈಸೂರಿನ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಸೋಮಣ್ಣ ಅವರು ಮತಗಟ್ಟೆ ಪರಿಶೀಲನೆಗೆ ತೆರಳಿದ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಸೋಮಣ್ಣ ಅವರಿಗೆ ಅಡ್ಡಿ ಪಡಿಸಿ ಅವರ ವಿರುದ್ಧ ಘೋಷಣೆಗಳನ್ನು ಸಹ ಕೂಗಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆಗಳನ್ನು ಹಾಕಿದ್ದು, ಜಟಾಪಟಿಗೆ ಕಾರಣವಾಗಿದೆ.
ಎರಡು ಪಕ್ಷದ ಕಾರ್ಯಕರ್ತರು ಪರಸ್ಪರ ಘೋಷಣೆಗಳನ್ನು ಕೂಗಿದ ಕಾರಣ ಕೊಂಚ ಮಟ್ಟದ ಉದ್ರಿಕ್ತ ವಾತಾವರಣಕ್ಕೆ ಕಾರಣವಾಯಿತು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.