ವಿಜಯಪುರ: ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.5 : ಬಿಜೆಪಿ ಗೆಲುವಿನ ಸುದ್ದಿ ಹರಡುತ್ತಿದ್ದಂತೆಯೇ ಕಾರ್ಯಕರ್ತರ ದಂಡು ನಗರದ ಗಾಂಧಿ ವೃತ್ತ, ಸಿದ್ದೇಶ್ವರ ದೇವಸ್ಥಾನದ ಎದುರು ಸೇರಿದಂತೆ ಪ್ರಮುಖ ಬೀದಿಗಳಲ್ಲಿ ವಿಜಯೋತ್ಸವ ಆಚರಿಸಿದರು.
ಹಲವಾರು ಬಡಾವಣೆಗಳಲ್ಲಿ ವಿಜಯೋತ್ಸವ ಸಂಭ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಮಿಂದೆದ್ದರು. ಪರಸ್ಪರ ಗುಲಾಲು ಎರಚಿ ಜೈ ಶ್ರೀರಾಮ ಜೈ ಶ್ರೀರಾಮ ಎಂಬ ಘೋಷಣೆ ಮೊಳಗಿಸಿ ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.
ನಿಷೇದಾಜ್ಞೆಯ ಹಿನ್ನೆಲೆಯಲ್ಲಿ ಪ್ರತಿ ಬಾರಿ ಕಂಡು ಬರುವ ಸಾವಿರಾರು ಸಂಖ್ಯೆಯ ಕಾರ್ಯಕರ್ತರ ದಂಡು ಕಾಣಿಸಿಗಲಿಲ್ಲ, ಆದರೂ ಅಣತಿ ದೂರದಲ್ಲಿಯೇ ಅಭ್ಯರ್ಥಿಗಳು ಗುಲಾಲು ಎರಚಿ ಸಂಭ್ರಮಿಸಿದರು.
ಒಳಗಡೆ ಅಭ್ಯರ್ಥಿ, ಮತ ಎಣಿಕೆ ಏಜೆಂಟರಿಗೆ ಮೊಬೈಲ್ ಒಯ್ಯಲು ಅವಕಾಶವಿರಲಿಲ್ಲ, ಹೀಗಾಗಿ ಹೊರಭಾಗದಲ್ಲಿ ನೆರೆದಿದ್ದ ಕಾರ್ಯಕರ್ತರು, ಹಿಂಬಾಲಕರು ಕ್ಷಣ ಕ್ಷಣದ ಮಾಹಿತಿ ಪಡೆಯಲು ಹರಸಾಹಸಪಡುವಂತಾಯಿತು. ಕ್ಷಣ ಕ್ಷಣದಲ್ಲಿ ಟ್ರೆಂಡ್ ಹೆಚ್ಚು ಕಡಿಮೆಯಾಗುತ್ತಿರುವುದು ಮೊದಲಾದ ಮಾಹಿತಿಗಳನ್ನು ಕಲೆ ಹಾಕುವಲ್ಲಿ ಕಾರ್ಯಕರ್ತರು ನಿರತರಾಗಿದ್ದರು. ಒಂದು ಕ್ಷಣ ತಡಮಾಡದೇ `ಏನು ಅಪಡೇಟ್..’ ಎಂಬುದು ಕೇಳುವ ಕಾರ್ಯದಲ್ಲಿಯೇ ಕಾರ್ಯಕರ್ತರು ನಿರತರಾಗಿದ್ದರು.
ಒಳಗೆ ಇದ್ದ ತಮ್ಮ ಏಜೆಂಟರು ಹೊರಗೆ ಬಂದು ಮಾಹಿತಿ ನೀಡಿ ನಾವು ಮುಂದಿದ್ದೆವೆ, ವಿಜಯೋತ್ಸವ ಸಿದ್ಧತೆ ಮಾಡಿಕೊಳ್ಳಿ ಎಂಬ ಸಿಗ್ನಲ್ ನೀಡುತ್ತಿರುವ ದೃಶ್ಯ ಗೋಚರಿಸಿತು. ನಂತರ ಹೇಗಾದರೂ ಮಾಡಿ ಸಂಪರ್ಕ ಸಾಧಿಸಿ ಆಯ ವಾರ್ಡ್‍ನಲ್ಲಿ ವಿಜಯೋತ್ಸವ ಆಚರಣೆಗೆ ಸಂದೇಶ ರವಾನಿಸುತ್ತಿರುವುದು ಕಂಡು ಬಂದಿತು.
ಸಂಸದ ರಮೇಶ ಜಿಗಜಿಣಗಿ ಅವರ ಗೆಲುವು ಖಾತ್ರಿಯಾಗುತ್ತಿದ್ದಂತೆ ಹಾಗೂ ಅಧಿಕೃತ ಎಣಿಕೆ ಇನ್ನೂ ಬಾಕಿ ಇರುವಾಗಲೇ ಕಾರ್ಯಕರ್ತರು ಬಿಜೆಪಿ ಪರವಾದ ಜಯ ಘೋಷ ಮೊಳಗಿಸಲು ಮುಂದಾದರು. ಈ ವೇಳೆ ರಮೇಶ ಜಿಗಜಿಣಗಿ ಅವರಿಗೆ ಗುಲಾಲು ಎರಚಿ ಶುಭಕೋರಿದರು. ಕಾರ್ಯಕರ್ತರ ಅಭಿಮಾನಕ್ಕೆ ಮನಸೋತ ಜಿಗಜಿಣಗಿ ಸಹ ಕಾರ್ಯಕರ್ತರೊಂದಿಗೆ ಕೆಲ ಕಾಲ ಆಪ್ತಭಾವದೊಂದಿಗೆ ವಿಜಯೋತ್ಸವದಲ್ಲಿ ಭಾಗಿಯಾದರು. ನಂತರ ಜಿಲ್ಲಾ ಚುನಾವಣಾಧಿಕಾರಿಗಳಿಂದ ಪ್ರಮಾಣ ಪತ್ರ ಪಡೆದುಕೊಂಡರು.
ವಿಜಯೋತ್ಸವ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಗಾಂಧಿ ವೃತ್ತ ಸೇರಿದಂತೆ ಬಹುತೇಕ ಕಡೆಗಳಲ್ಲಿ ಪಟಾಕಿಗಳ ಸದ್ದು, ಸಿಹಿ ಹಂಚುವಿಕೆ, ವಿಜಯೋತ್ಸವದ ಸಂಭ್ರಮ ಮುಗಿಲು ಮುಟ್ಟಿತ್ತು. ಗಾಂಧಿ ವೃತ್ತದಲ್ಲಿ, ಶ್ರೀ ಸಿದ್ದೇಶ್ವರ ದೇವಾಲಯ, ಶ್ರೀ ಶಿವಾಜಿ ವೃತ್ತ, ಬಿಜೆಪಿ ಕಾರ್ಯಾಲಯ, ಸಂಸದ ರಮೇಶ ಜಿಗಜಿಣಗಿ ಅವರ ನಿವಾಸದ ಮುಂಭಾಗದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಭರ್ಜರಿ ವಿಜಯೋತ್ಸವದಲ್ಲಿ ತಲ್ಲೀನರಾದರು. ಮಾಜಿ ಸಚಿವ ಎಸ್.ಕೆ. ಬೆಳ್ಳುಬ್ಬಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ, ಬಿಜೆಪಿ ಧುರೀಣರಾದ ವಿಜುಗೌಡ ಪಾಟೀಲ ಮುಂತಾದ ನಾಯಕರು ವಿಜಯೋತ್ಸವದ ಸಂಭ್ರಮದಲ್ಲಿ ಭಾಗಿಯಾದರು.
ಬೆಳಿಗ್ಗೆಯೇ ಸಂಸದ ಜಿಗಜಿಣಗಿ ಶ್ರೀ ಸುಂದರೇಶ್ವರ ದೇವಾಲಯಕ್ಕೂ ಭೇಟಿ ನೀಡಿ ದರ್ಶನಾಶೀರ್ವಾದ ಪಡೆದುಕೊಂಡರು.