ವಿಜಯಪುರ ನಗರ ಸೌಂದರೀಕರಣ ಮೂಲಸೌಕರ್ಯ ವೃದ್ಧಿಗೆ ವಿಶೇಷ ಗಮನ ನೀಡಲು ಸೂಚನೆ

ವಿಜಯಪುರ ಜ.9: ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ನಗರದ ಮುಖ್ಯ ರಸ್ತೆಗಳ ಸುಧಾರಣೆ ಹಾಗೂ ನಗರ ಸೌಂದರೀಕರಣಕ್ಕೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ವಿಶೇಷ ಗಮನ ನೀಡುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಡಿ.ರಂದೀಪ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ವಿವಿಧ ಅಭಿವೃದ್ಧಿ, ಪ್ರವಾಹ ಮತ್ತು ಮಳೆ ಹಾನಿ ಕುರಿತು ಪರಿಶೀಲನಾ ಹಾಗೂ ಕೋವಿಡ್-19 ಕ್ರಮಗಳ ಬಗ್ಗೆ ಸಭೆ ನಡೆಸಿದ ಅವರು ದೆಹಲಿ ನಂತರ ಅತೀ ಹೆಚ್ಚು ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಸರ್ವಾಂಗೀಣ ಅಭಿವೃದ್ಧಿಗೆ ಗಮನ ನೀಡಬೇಕು. ವಿಶೇಷವಾಗಿ ಮುಖ್ಯ ರಸ್ತೆಗಳ ನಿರ್ಮಾಣ, ಘನ ತ್ಯಾಜ್ಯ ನಿರ್ವಹಣೆ, ಬೀದಿ ದೀಪಗಳ ಸುಧಾರಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುವ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.
ಐತಿಹಾಸಿಕ ಸ್ಮಾರಕಗಳನ್ನು ಹೊಂದಿರುವ ಈ ನಗರ ಪ್ರವಾಸೋದ್ಯಮ ತಾಣವಾಗಿ ಅಭಿವೃದ್ಧಿಗೊಳ್ಳಬೇಕಾಗಿದೆ. ಕ್ರಿಯಾಯೋಜನೆಯನ್ವಯ ರಸ್ತೆಗಳ ವಿಶೇಷವಾಗಿ ಅಥಣಿ, ಸೋಲಾಪೂರ, ಬಾಗಲಕೋಟ ಮತ್ತು ಸಿಂದಗಿ ಕಡೆಗೆ ಹೋಗುವಂತಹ ರಸ್ತೆಗಳು ಆಂತರಿಕ ರಸ್ತೆಗಳಿಗೆ ಸಂಪರ್ಕ ಹೊಂದಿದ್ದು, ಇಂತಹ ರಸ್ತೆಗಳ ಸುಧಾರಣೆಗೆ ಗಮನ ನೀಡಬೇಕು. ಅವಶ್ಯಕ ಅನುದಾನದ ಬಗ್ಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸಲಾಗುವುದು. ಅದರಲ್ಲಿಯೂ ಬೃಹತ್ ಪ್ರಮಾಣದ ಮೂಲಸೌಕರ್ಯ ಕಲ್ಪಿಸುವಂತಹ ಕಾರ್ಯಗಳ ಅಡಿಯಲ್ಲಿ ಪ್ಯಾಕೆಜ್ ರೂಪದಲ್ಲಿ ಅನುದಾನ ತರಲು ಪ್ರಯತ್ನಿಸಲಾಗುವುದು. ಸರ್ಕಾರಕ್ಕೆ ಪಾಲಿಕೆಯಿಂದ ಸಲ್ಲಿಸಲಾದ ಪ್ರಸ್ತಾವನೆಗಳ ಬಗ್ಗೆಯೂ ಗಮನಕ್ಕೆ ತರಲು ಅವರು ಸೂಚನೆ ನೀಡಿದರು.
ಅದರಂತೆ ಐತಿಹಾಸಿಕ ಸ್ಮಾರಕಗಳ ವ್ಯಾಪ್ತಿಯಲ್ಲಿ ಅವಶ್ಯಕ ಮೂಲಸೌಲಭ್ಯಗಳನ್ನು ಕಲ್ಪಿಸುವ ಕುರಿತು ಪ್ರವಾಸೋದ್ಯಮ ಅಧಿಕಾರಿಗಳು ಕೂಡ ವಿಶೇಷ ರೀತಿಯಲ್ಲಿ ಚಿಂತನೆ ನಡೆಸಿ ಯೋಜನೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಸಹ ಸಲ್ಲಿಸಬೇಕು. ಪುರಾತತ್ವ ಮತ್ತು ಸರ್ವೇಕ್ಷಣಾ ಇಲಾಖೆಯ ಮೂಲಕ ಅನುದಾನಕ್ಕೆ ತಾಂತ್ರಿಕ ಅನುಮೋದನೆ ಪಡೆಯಬೇಕೆಂದು ತಿಳಿಸಿದ ಅವರು ನಗರದ ಸ್ವಚ್ಛತೆ, ವೈಯಕ್ತಿಕ ಶೌಚಾಲಯಗಳ ಅತ್ಯುತ್ತಮ ನಿರ್ವಹಣೆ, ಘನ ತ್ಯಾಜ್ಯಗಳ ನಿರ್ವಹಣೆ ಇತರೆ ಅಭಿವೃದ್ಧಿ ಕಾರ್ಯಗಳ ಸಮರ್ಪಕ ನಿರ್ವಹಣೆಯ ಮೂಲಕ ಸುಂದರ ನಗರ ರೂಪಿಸಲು ಸಾಧ್ಯವಿದ್ದು, ಮಹಾನಗರ ಪಾಲಿಕೆ, ಪ್ರವಾಸೋದ್ಯಮ ಸೇರಿದಂತೆ ಇತರ ಅವಶ್ಯಕ ಇಲಾಖೆಗಳು ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದರು.
ನಗರ ಸೌಂದರೀಕರಣದಿಂದ ಹೂಡಿಕೆದಾರರನ್ನು ಆಕರ್ಷಿಸಲು ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ ನೀಡುವ ಅಗತ್ಯವಿದೆ. ಘನ ತ್ಯಾಜ್ಯಗಳ ಮತ್ತು ಕಸ ನಿರ್ವಹಣೆಗೆ ಏಕೀಕೃತ ನಿಯಂತ್ರಣ ವ್ಯವಸ್ಥೆ ಜಾರಿಗೆ ಕ್ರಮಕೈಗೊಳ್ಳಬೇಕು. ತೆರಿಗೆ ಬಾಕಿ ವಸೂಲಾತಿಗೆ ಮತ್ತು ಸಂಗ್ರಹಕ್ಕೆ ಗಮನ ನೀಡುವಂತೆ ತಿಳಿಸಿದ ಅವರು ಜಿಲ್ಲೆಯಲ್ಲಿ ಅರಣ್ಯ ಪ್ರಮಾಣ ಕಡಿಮೆ ಇರುವ ಹಿನ್ನೆಲೆಯಲ್ಲಿ ನಗರದ ಹೊರವಲಯದಲ್ಲಿ ಅರಣ್ಯ ಭೂಮಿ ಗುರುತಿಸಲು ಪ್ರಯತ್ನಿಸಬೇಕು ಇಕೋ ಟೂರಿಸ್‍ಂ ಅಭಿವೃದ್ಧಿಗೆ ಪ್ರಸ್ತಾವನೆ ಸಿದ್ಧಪಡಿಸಬೇಕು. ಅರಣ್ಯ ಅಧಿಕಾರಿಗಳು ಅರಣ್ಯೀಕರಣ ಮತ್ತು ಇಕೋ ಟೂರಿಸ್‍ಂ ಕುರಿತು ಪಿಪಿಟಿ ಮೂಲಕ ವರದಿ ಸಿದ್ಧಪಡಿಸಲು ಸೂಚನೆ ನೀಡಿದರು.
ವಿಜಯಪುರ ನಗರದ ಸಮೀಪ ಬುರಾಣಾಪೂರ ಗ್ರಾಮದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿಮಾನ ನಿಲ್ದಾಣಕ್ಕೆ ಸಂಬಂಧಪಟ್ಟಂತೆ ಪ್ಯಾಕೆಜ್ ಒಂದರ ಕಾಮಗಾರಿಗೆ ಸಂಬಂಧಪಟ್ಟಂತೆ ಟೆಂಡರ್ ಏಜೆನ್ಸಿ ನಿಗದಿಯಾಗಿದ್ದು, ಪೂರ್ವ ಚಟುವಟಿಕೆಗಳು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಅವರು ಹರ್ಷ ವ್ಯಕ್ತಪಡಿಸಿ ಈ ಹಿಂದೆ ಬೇಸಿಗೆ ಕಾಲದಲ್ಲಿ ತೀವ್ರ ನೀರಿನ ಸಂಕಷ್ಟ ಎದುರಿಸುತ್ತಿದ್ದ ಜಿಲ್ಲೆಯು ಕ್ರಮೇಣ ನೀರಿನ ಕೊರತೆಯಿಂದ ಹೊರಬರುತ್ತಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.
ಕ್ರೀಡಾ ಇಲಾಖೆ ವ್ಯಾಪ್ತಿಯ ಸೈಕಲಿಂಗ್ ವೆಲೋಡ್ರೋಮ್ ನಿರ್ಮಾಣ ಮಾಡಲು ವಿಳಂಬ ಮತ್ತು ಈ ಹಿಂದಿನ ಏಜೆನ್ಸಿ ಕಾಮಗಾರಿಗೆ ನಿರಾಕರಿಸುತ್ತಿರುವುದರಿಂದ ನಿಯಮಾವಳಿಯಂತೆ ಈ ಏಜೆನ್ಸಿಯನ್ನು ರದ್ದು ಪಡಿಸಿ, ಬಾಕಿ ಅನುದಾನ ವಸೂಲಾತಿ ಮಾಡಿ ನೂತನ ಟೆಂಡರ್ ಕರೆಯುವ ಬಗ್ಗೆ ಸಂಬಂಧಪಟ್ಟ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರುವಂತೆ ಕ್ರೀಡಾಧಿಕಾರಿಗಳಿಗೆ ಸೂಚಿಸಿದರು. ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಬಾಕಿ ಉಳಿದ ಪ್ರಸ್ತಾವನೆಗಳ ಬಗ್ಗೆ ತಮ್ಮ ಗಮನಕ್ಕೆ ತರುವಂತೆ ಅವರು ಸೂಚನೆ ನೀಡಿದರು.
ಇತ್ತೀಚೆಗೆ ಭೀಮಾನದಿ ವ್ಯಾಪ್ತಿಯಲ್ಲಿ ಬಂದಿದ್ದ ಪ್ರವಾಹ ಮತ್ತು ಅತೀವೃಷ್ಟಿಯಿಂದ ಹಾನಿಯಾದ ಕುರಿತು ಸಮಗ್ರ ವರದಿಯೊಂದಿಗೆ ಭವಿಷ್ಯದಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಸಿದ್ಧತೆಗಳ ಬಗ್ಗೆ ಈಗಿನಿಂದಲೇ ಚಿಂತನೆ ನಡೆಸಿ ಹೆಚ್ಚಿನ ಸಾವು ನೋವು ಆಗದಂತೆ ರಕ್ಷಣಾ ಕ್ರಮಗಳ ಬಗ್ಗೆ ಪೂರ್ವ ಯೋಜನೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಭೀಮಾನದಿ ಪ್ರವಾಹ ಕುರಿತಂತೆ ಮುನ್ನೆಚ್ಚರಿಕಾ ವ್ಯವಸ್ಥೆ ಸದೃಢಗೊಳಿಸಬೇಕು. ಪರಿಹಾರಕ್ಕಾಗಿ ಮಂಜೂರಾದ ಅನುದಾನ, ಪರಿಹಾರ ನೀಡಿದ ಬಗ್ಗೆ ದಾಖಲೀಕರಣ ಸಮರ್ಪಕವಾಗಿರುವಂತೆ ನೋಡಿಕೊಳ್ಳಬೇಕು.
ಕೋವಿಡ್ ಹಿನ್ನೆಲೆ ಇತರೆ ಲಸಿಕಾ ಕಾರ್ಯಕ್ರಮಗಳ ಮೇಲೆ ಪರಿಣಾಮ ಆಗದಂತೆ ನಿಗಾ ವಹಿಸಬೇಕು. ಕೇಂದ್ರ ಸರ್ಕಾರದ ಮಾರ್ಗಸೂಚಿಯನ್ವಯ ಕೋವಿಡ್ ಲಸಿಕಾ ಕಾರ್ಯಕ್ರಮಕ್ಕೆ ಪೂರ್ವಾಭ್ಯಾಸದ ಜೊತೆಗೆ ಮುಂದಿನ ದಿನಗಳಲ್ಲಿ ನೀಡಬಹುದಾದ ಲಸಿಕೆ ಬಗ್ಗೆ ಸಾರ್ವಜನಿಕರಲ್ಲಿ ಸೂಕ್ತ ಅರಿವು ಮೂಡಿಸಬೇಕು. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಸೂಕ್ತ ಜಾಗೃತಿ ಮೂಡಿಸುವ ಕಾರ್ಯ ನಿರಂತರ ನಡೆಯಬೇಕು. ಕೋವಿಡ್ ರೋಗಿಗಳಿಗೆ ಇರುವಂತಹ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳ ಮತ್ತು ಹೋಮ್ ಐಸೋಲೇಶನ್‍ಗಳ ಬಗ್ಗೆ ಹೆಚ್ಚಿನ ಗಮನ ನೀಡುವಂತೆ ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಕೋವಿಡ್ -19 ಡ್ರೈ ರನ್ ಪೂರ್ವಾಭ್ಯಾಸ, ಪ್ರವಾಹ ಹಾನಿ ಕುರಿತು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಿಸಿದ್ಧಿ, ಉಪವಿಭಾಗಾಧಿಕಾರಿ ರಾಹುಲ್ ಸಿಂಧೆ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.