ವಿಜಯಪುರ ನಗರವನ್ನು ಲಾಕಡೌನ್ ಮುಕ್ತ ಮಾಡಿ ಎಂದು ಜಿಲ್ಲಾಧಿಕಾರಿಗೆ ಪತ್ರ ಬರೆದ ಶಾಸಕ ಯತ್ನಾಳ

ವಿಜಯಪುರ, ಜೂ.5-ನಗರವನ್ನು ಲಾಕಡೌನ್ ಮುಕ್ತವಾಗಿ ಮಾಡಬೇಕು ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಬೆಳಿಗ್ಯೆ 10 ರಿಂದ ಸಾಯಂಕಾಲ 5 ಗಂಟೆಯವರೆಗೆ ವಿಜಯಪುರ ನಗರದಲ್ಲಿ ಲಾಕಡೌನ್ ತೆರವುಗೊಳಿಸಬೇಕು ಎಂದು ಯತ್ನಾಳ ಆಗ್ರಹಿಸಿದ್ದು, ಯತ್ನಾಳ ಬರೆದಿರುವ ಪತ್ರದ ಪ್ರತಿ ಲಭ್ಯವಾಗಿದೆ. ಈ ಪತ್ರದಲ್ಲಿ ವಿಜಯಪುರ ನಗರವನ್ನು ಯಾಕೆ ಲಾಕಡೌನ್ ಮುಕ್ತ ಮಾಡಬೇಕು ಎಂಬುದನ್ನು ಯತ್ನಾಳ ಜಿಲ್ಲಾಧಿಕಾಪಿ ಪಿ. ಸುನೀಲ ಕುಮಾರ ಅವರಿಗೆ ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡಿದ್ದಾರೆ.
ಈ ಪತ್ರದಲ್ಲಿ ಯತ್ನಾಳ, ರಾಜ್ಯಾದ್ಯಂತ ಈಗಾಗಲೇ ಲಾಕಡೌನ್ ಜಾರಿಯಲ್ಲಿದೆ. ಸೋಂಕಿತರ ಪ್ರಮಾಣ ಹೆಚ್ಚಿರುವ ಪ್ರದೇಶಗಳಲ್ಲಿ ಅನಿವಾರ್ಯವಾಗಿ ಲಾಕಡೌನ್ ಮುಂದುವರೆಸಬಹುದಾಗಿದೆ. ಆದರೆ, ಇತ್ತೀಚೆಗೆ ದೇಶದ ಪ್ರಧಾನ ಮಂತ್ರಿಯವರು ಲಾಕಡೌನ್ ವಿಷಯದಲ್ಲಿ ಕ್ರಮ ಜರುಗಿಸಲು ಸ್ಥಳೀಯ ಜಿಲ್ಲಾಧಿಕಾರಿಗಳಿಗೆ ಅಧಿಕಾರವನ್ನು ನೀಡಿರುತ್ತಾರೆ. ಆದ್ದರಿಂದ ಈಗಾಗಲೇ ವಿಜಯಪುರ ಕೇಂದ್ರ ಸ್ಥಾನವಾದ ವಿಜಯಪುರ ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ವಿಜಯಪುರ ನಗರ ಪ್ರದೇಶವನ್ನು ಲಾಕಡೌನ್ ಮುಕ್ತ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಿಜಯಪುರ ನಗರವನ್ನು ಲಾಕಡೌನ್ ಮುಕ್ತ ಮಾಡುವುದರಿಂದ ಮಳೆಗಾಲದ ಈ ಸಂದರ್ಭದಲ್ಲಿ ರೈತರು ಬಿತ್ತನೆಗಾಗಿ ಬೀಜ ಮತ್ತು ಗೊಬ್ಬರ ಖರೀದಿಸಲು ವಿಜಯಪುರ ನಗರಕ್ಕೆ ಬರಲು ಅನುಕೂಲವಾಗುತ್ತದೆ. ಅಲ್ಲದೇ, ಸಣ್ಣ-ಪುಟ್ಟ ವ್ಯಾಪಾರಿಗಳು ತಮ್ಮ ಉಪಜೀವನಕ್ಕಾಗಿ ವ್ಯಾಪಾರ ನಡೆಸಲು ಸಹಾಯವಾಗುತ್ತದೆ.
ಈ ಹಿನ್ನೆಲೆಯಲ್ಲಿ ತಮಗೆ ಅಧಿಕಾರ ಇರುವುದರಿಂದ ವಿಜಯಪುರ ನಗರದಲ್ಲಿ ಬೆ. 10 ರಿಂದ ಸಂ. 5ರ ವರೆಗೆ ಲಾಕಡೌನ್ ತೆರವುಗೊಳಿಸಬೇಕು ಎಂದು ಯತ್ನಾಳ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.