ವಿಜಯಪುರ ನಗರದ ವಿವಿಧೆಡೆ ರಾಮ ನವಮಿ ಉತ್ಸವ

ವಿಜಯಪುರ,ಮಾ.31:ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರ ಉತ್ಸವವನ್ನು ಇಂದು ನಗರದ ವಿವಿಧೆಡೆ ಸಕಲ ಭಕ್ತಿ ವೈಭವಗಳಿಂದ ಆಚರಿಸಲಾಯಿತು.
ಆಯೋಧ್ಯಾ ನಗರದಲ್ಲಿ:
ಶಹರದ ಆಯೋಧ್ಯಾ ನಗರ ಬಡಾವಣೆಯಲ್ಲಿ ಉತ್ತರಾಧಿ ಮಠಾಧೀಶರಿಂದ ಪ್ರತಿಷ್ಠಾಪಿಸಲ್ಟಟ್ಟ ಶ್ರೀ ರಾಮ ಮಂದಿರದಲ್ಲಿ ರಾಮನ ಮೂರ್ತಿಗೆ ಬೆಳಿಗ್ಗೆ ರಾಮದೇವರ ಮೂರ್ತಿಗೆ ಪಂಚಾಮೃತ ಅಭಿಷೇಕ ಜರುಗಿತು. ರಾಮಾಯಣದ ಅರಣ್ಯ ಕಾಂಡ ಕುರಿತು ಕಳೆದ ಮೂರು ದಿನಗಳಿಂದ ಪಂಡಿತ ಮಧ್ವಾಚಾರ್ಯ ಮೋಖಾಶಿ ಅವರಿಂದ ಹೇಳುತ್ತಿದ್ದ ಪ್ರವಚನದ ಮಂಗಳ ನಡೆಯಿತು. ಅಲ್ಲದೇ ರಾಮಜನ್ಮೋತ್ಸವದ ಕಥೆಯನ್ನು ಸಹ ಆಚಾರ್ಯರು ಹೇಳಿದರು.
ಬಳಿಕ ರಾಮ ತೋಟ್ಟಿಲೋತ್ಸವ ಜರುಗಿ ಬಾಲ ರಾಮನಿಗೆ ನಾಮಕರಣ ಇಟ್ಟು ಸಂಭ್ರಮಿಸಿದರು. ವಿಶೇಷ ಪೂಜೆಯನ್ನು ಕಣ್ತುಂಬಾ ನೋಡಿ ಸಂತಸ ಪಟ್ಟರು. ಯುವ ಪಂಡಿತ ಸಂಜೀವಾಚಾರ್ಯ ಮದಭಾವಿ ಸೇರಿದಂತೆ ಅಸಂಖ್ಯಾತ ಭಕ್ತರು ಈ ಉತ್ಸವದಲ್ಲಿ ಭಾಗವಹಿಸಿದ್ದರು.
ಪ್ರಸನ್ನೇಶ್ವರ ದೇವಾಲಯದಲ್ಲಿ:
ನಗರದ ಝೆಂಡಾ ಕಟ್ಟಿ ಹಳಕೇರಿ ಗಲ್ಲಿಯ ಗಾಯಿ ಚಾಳ್ ಬಳಿ ಇರುವ ಶ್ರೀ ಪ್ರಸನ್ನೇಶ್ವರ ದೇವಸ್ಥಾನದಲ್ಲಿ ಶ್ರೀರಾಮ ನವಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.
ಅದರಂಗವಾಗಿ ಬೆಳಿಗ್ಗೆ ಸುಪ್ರಭಾತದ ಬಳಿಕ ಪಂಚಾಮೃತ ಅಭಿಷೇಕ, ಅಲಂಕಾರ ಸೇವೆ, ಶ್ರೀ ರಾಮನ ತೊಟ್ಟಿಲೋತ್ಸವ, ಶ್ರೀ ಸತ್ಯನಾರಾಯಣ ಪೂಜೆ ಜರುಗಿತು. ಶ್ರಿ ಪ್ರಸನ್ನೇಶ್ವರ ಸೇವಾ ಭಜನಾ ಮಂಡಳಿ ಸದಸ್ಯರಿಂದ ರಾಮ ನಾಮದ ಭಕ್ತಿ ಸಂಗೀತ ಸೇವೆ ಅತ್ಯಂತ ಸುಶ್ರಾವ್ಯವಾಗಿ ನಡೆದು ಭಕ್ತರ ಭಕ್ತಿಯ ಪರಾಕಾಷ್ಟೆ ಮೆರೆಯಿತು.
ರಾಮ ತೋಟ್ಟಿಲೋತ್ಸವದ ಸಂದರ್ಭದಲ್ಲಿ ನೂರಾರು ಭಕ್ತರು ಭಾಗವಹಿಸಿ ಬಾಲ ರಾಮನ ಸುಂದರ ರೂಪವನ್ನು ಮನದಲ್ಲಿ ತುಂಬಿಕೊಂಡರು. ವಿದ್ವಾನ್ ಪ್ರಕಾಶಾಚಾರ್ಯ ಮದಭಾವಿ ನೇತ್ರತ್ವ ವಹಿಸಿದ್ದರು.
ನಾಗೇಶರಾವ ಕುಲಕರ್ಣಿ, ಅಪ್ಪಾರಾವ ಕುಲಕರ್ಣಿ(ತಾಂಬಾ), ಆನಂದರಾವ ಗಾಯಿ, ವಸಂತರಾವ ಗಾಯಿ, ಅನಿತಾ ಗಾಯಿ, ಸಂತೋಷ ಕಠಾವಿ, ಅಶ್ವಿನಿ ಕುಲಕರ್ಣಿ ಮುಂತಾದವರು ಭಾಗವಹಿಸಿದ್ದರು.
ಆಚಾರ ಕಟ್ಟಿಯಲ್ಲಿ:
ನಗರದ ಸ್ಟೇಶನ್ ರಸ್ತೆಯಲ್ಲಿರುವ ಆಚಾರ ಕಟ್ಟಿಯ ಪ್ರದೇಶದಲ್ಲಿ ಪುರಾತನ ಶ್ರೀ ರಾಮ ಮಂದಿರದಲ್ಲಿ ಸಹ ಇಂದು ರಾಮ ನವಮಿಯನ್ನು ಭಕ್ತಿ ಶ್ರದ್ಧೆಯಿಂದ ಆಚರಿಸಲಾಯಿತು.
ಬೆಳಿಗ್ಗೆ ಪಂಡಿತ ಮಧ್ಚಾಚಾರ್ಯ ಮೋಖಾಶಿ ಅವರಿಂದ ಪ್ರವಚನ ಜರುಗಿತು. ಪಂಡಿತ ಅಜೀತಾಚಾರ್ಯ ಹನಗಂಡಿ ನೇತ್ರತ್ವದ ತಂಡ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
ಡಾ. ರಾಘವೇಂದ್ರ ಕಾವಿ ನೇತ್ರತ್ವದಲ್ಲಿ ನಿರ್ಮಾಲ್ಯ ವಿಸರ್ಜನೆ ಪ್ರವಚನ, ಪಾರಾಯಣ, ರಾಮದೇವರಿಗೆ ನರಸಿಂಹ ದೇವರಿಗೆ ಪಂಚಾಮೃತ ಅಭಿಷೇಕ, ವಿಶೇಷಪೂಜೆ ಜರುಗಿ, ಅಪರಾಹ್ನ ರಾಮ ಜನನೋತ್ಸವ ಜರುಗಿತು. ವಿವಿಧ ಬಗೆಯ ಪುಷ್ಪಗಳಿಂದ ರಾಮನನ್ನು ಅಲಂಕರಿಸಲಾಗಿತ್ತು;
ಪುರಾತನ ಶ್ರೀ ರಾಮ ಮಂದಿರದಲ್ಲಿ:
ಸರಿ ಸುಮಾರು 125 ವರ್ಷಗಳ ಇತಿಹಾಸ ಹೊಂದಿರುವ ನಗರದ ರಾಮ ಮಂದಿರ ರಸ್ತೆಯಲ್ಲಿರುವ ಪುರಾತನ ಶ್ರೀ ರಾಮ ಮಂದಿರದಲ್ಲಿ ರಾಮ ನವಮಿ ಇಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಬೆಳಿಗ್ಗೆ ವಿಶೇಷ ಪೂಜೆ, 11 ಗಂಟೆಗೆ ಪುಷ್ಫವೃಷ್ಟಿ, ಬಳಿಕ ಅಪರಾಹ್ನ 12 ಕ್ಕೆ ಭಜನೆ ನಡೆಯಿತು. ಆಗಮಿಸಿರುವ ಭಕ್ತಾದಿಗಳಿಗೆ ಪಂಜೇರಿ ಪ್ರಸಾದ ವಿತರಣೆ ಮಾಡಲಾಯಿತು, ಇಸ್ಕಾನ್ ಭಕ್ತ ಮಂಡಳಿಯಿಂದ ಸಂಗೀತ ಸೇವೆ ಹಾಗೂ ಪಾಲಕಿ ಸೇವೆ ಜರುಗಿತು.
ಈಗಾಗಲೇ ಯುಗಾದಿಯಿಂದ ಆರಂಭಗೊಂಡ ಮಾಹೇಶ್ವರಿ ಮಹಿಳಾ ಭಕ್ತವೃಂದದಿಂದ ರಾಮಾಯಣ ಸುಂದರಕಾಂಡದ ಪಾರಾಯಣದ ಸಮಾರೋಪ ಜರುಗಿತು ಎಂದು ಮಂದಿರದ ಟ್ರಸ್ಟನ ಪರವಾಗಿ ಶ್ರೀನಿವಾಸ ಬಾಹೇತಿ ಪ್ರಕಟಣೆಯಲ್ಲಿ ತಿಳಿಸಿರುವರು.