ವಿಜಯಪುರ ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಓ ರಾಹುಲ್ ಶಿಂಧೆ

ವಿಜಯಪುರ:ಮೇ.31: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಅವರು ವಿಜಯಪುರ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಮಂಗಳವಾರ ಭೇಟಿ ನೀಡಿ ವಿವಿಧ ಯೋಜನೆಯಡಿ ಪ್ರಗತಿಯಲ್ಲಿರುವ ಕಾಮಗಾರಿ ಪರಿಶೀಲಿಸಿದರು.
ಹಡಗಲಿ ಎಲ್ ಟಿ ಗ್ರಾಮದ ಅಂಗನವಾಡಿ ಕಟ್ಟಡ ನಿರ್ಮಾಣದ ಕಾರ್ಯ ಪರಿಶೀಲಿಸಿದರು. ಹಡಗಲಿ ಎಲ್ ಟಿ-2 ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿನ ಅಂಗನವಾಡಿ ಮಕ್ಕಳಿಗೆ ಒದಗಿಸುವ ಪೌಷ್ಠಿಕ ಆಹಾರದ ವಿವರ ಪಡೆದುಕೊಂಡರು. ಹಡಗಲಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಪ್ರಗತಿಯಲ್ಲಿರುವ ಶಾಲಾ ಕಂಪೌಂಡ್, ಅಡುಗೆ ಕೋಣೆ, ಭೋಜನಾಲಯ, ಶೌಚಾಲಯ ಹಾಗೂ ಬಾಸ್ಕೆಟ್ ಬಾಲ್ ಮೈದಾನ ಕಾಮಗಾರಿ ವೀಕ್ಷಣೆ ಮಾಡಿದರು. ಅಂಗನವಾಡಿ ಕಟ್ಟಡಗಳು ಮತ್ತು ಶಾಲಾ ಅಭಿವೃದ್ಧಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು. ಕಳಪೆ ಕಾಮಗಾರಿ ನಡೆಯದಂತೆ ಎಚ್ಚರ ವಹಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿಯಲ್ಲಿ ಲಭ್ಯ ಅನುದಾನದಲ್ಲಿ ಶಾಲಾ ಕೊಠಡಿಗಳ ದುರಸ್ತಿಗೆ ಆದ್ಯತೆ ನೀಡುವಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿ, ಗ್ರಾಮದಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸಿ, ಕುಡಿಯುವ ನೀರಿನ ಮೂಲ ಮತ್ತು ಸುತ್ತಮುತ್ತಲೂ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡುವಂತೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಎಲ್ಲಾ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಗÁ್ರಮ ಆರೋಗ್ಯ ಅಭಿಯಾನದ ಲಾಭ ಪಡೆಯಿರಿ: ನರೇಗಾ ಕೂಲಿಕಾರ್ಮಿಕರಿಗೆ ವಿಜಯಪುರ ತಾಲೂಕಿನ ಹಡಗಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳದಲ್ಲಿ ಕೆ.ಎಚ್.ಪಿ.ಟಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಅಭಿಯಾನಕ್ಕೆ ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದ ಸಿಇಓ ಅವರು, ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಮೇ 22 ರಿಂದ ಗ್ರಾಮ ಆರೋಗ್ಯ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಅಂಗವಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕಾರ್ಯ ನಿರ್ವಹಿಸುವ ಎಲ್ಲ ಕೂಲಿಕಾರ್ಮಿಕರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ನಡೆಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಜನರೂ ಸೇರಿದಂತೆ ಸದೃಢ ಆರೋಗ್ಯಕ್ಕಾಗಿ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಹಿತ ದೃಷ್ಟಿಯಿಂದ ಸರಕಾರ ಈ ಅಭಿಯಾನವನ್ನು ಜಾರಿಗೆ ತರುವ ಮೂಲಕ ನರೇಗಾ ಕೂಲಿಕಾರ್ಮಿಕರು ತಾವು ಕೆಲಸ ನಿರ್ವಹಿಸುವ ಸ್ಥಳದಲ್ಲಿಯೇ ಅವರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ.
ಈಗಾಗಲೇ ಕೆ.ಎಚ್.ಪಿ.ಟಿ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಈ ಅಭಿಯಾನ ನಡೆಯುತ್ತಿದೆ. ಗ್ರಾಮ ಪಂಚಾಯತಿ ಮಟ್ಟದಲ್ಲಿ ಈ ಅಭಿಯಾನವನ್ನು ಹಮ್ಮಿಕೊಳ್ಳಲು ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗಿದ್ದು, ಸಮರ್ಪಕವಾಗಿ ಕಾರ್ಯ ನಿರ್ವಹಿಸುವ ದೃಷ್ಟಿಯಿಂದ ಆನ್ಲೈನ್ ತರಬೇತಿ ಸಹ ನೀಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ತಾಲೂಕ ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಕೆ.ಹೊಂಗಯ್ಯ, ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸುಸಲಾಬಾಯಿ ಪಿ ಜಾಧವ, ಉಪಾಧ್ಯಕ್ಷರಾದ ಬಾಪುಗೌಡ ಬ ಬಿರಾದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಾದ ಎಸ್.ಸಿ.ಮ್ಯಾಗೇರಿ, ದೀಪಾಕ್ಷಿ ಜಾನಕಿ, ಅರಣ್ಯ ಅಧಿಕಾರಿಗಳಾದ ಗಿರೀಶ ಹಲಕುಡೆ, ತಾಲೂಕು ಪಂಚಾಯತಿ ಸಹಾಯಕ ನಿರ್ಧೇಶಕರಾದ ಕಾಶಿಮಸಾಬ ಮಸಳಿ, ತಾಲೂಕು ಆರೋಗ್ಯ ಅಧಿಕಾರಿಗಳಾದ ಆರ್.ಎಸ್.ಪಾಟೀಲ, ಆರೋಗ್ಯ ಇಲಾಖೆಯ ಅಧಿಕಾರಿಗಳಾದ ಎ.ಟಿ.ಸೂರ್ಯವಂಶಿ, ಕುಮಾರಿ ಲಕ್ಷ್ಮಿ ಅಗಸಿಬಾಗಿಲ, ಪಂಚಾಯತಿ ಅಭಿವೃದ್ದಿ ಅಧಿಕಾರಿಗಳಾದ ಆರ್. ಎಸ್. ಗಾಯಕವಾಡ ಸೇರಿದಂತೆ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.