ವಿಜಯಪುರ ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಶೇ.67.77 ರಷ್ಟು ಮತದಾನ

ವಿಜಯಪುರ, ಮೇ.11: ವಿಧಾನಸಭೆ ಚುನಾವಣೆ ಅಂಗವಾಗಿ ಮೇ.10ರಂದು ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಬೆಳಿಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ಶೇ.67.77 ರಷ್ಟು ಮತದಾನವಾಗಿದೆ.
ವಿಧಾನಸಭಾ ಕ್ಷೇತ್ರವಾರು ವಿವರದಂತೆ 26-ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಶೇ. 68.79 ರಷ್ಟು, 27-ದೇವರಹಿಪ್ಪರಗಿ ಮತಕ್ಷೇತ್ರದಲ್ಲಿ ಶೇ. 66.81 ರಷ್ಟು, 28-ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಶೇ.69.85 ರಷ್ಟು , 29-ಬಬಲೇಶ್ವರ ಮತಕ್ಷೇತ್ರದಲ್ಲಿ ಶೇ. 77.60 ರಷ್ಟು 30-ಬಿಜಾಪುರ ನಗರ ಮತಕ್ಷೇತ್ರದಲ್ಲಿ ಶೇ.64.43 ರಷ್ಟು, 31-ನಾಗಠಾಣ ಮತಕ್ಷೇತ್ರದಲ್ಲಿ ಶೇ.65.87 ರಷ್ಟು ಹಾಗೂ 32-ಇಂಡಿ ಮತಕ್ಷೇತ್ರದಲ್ಲಿ ಶೇ. 70.52 ರಷ್ಟು ಮತ್ತು 33-ಸಿಂದಗಿ ಮತಕ್ಷೇತ್ರದಲ್ಲಿ ಶೇ. 60.17 ರಷ್ಟು ಮತದಾನ ಸೇರಿದಂತೆ ಜಿಲ್ಲೆಯ 8 ವಿಧಾನಸಭಾ ವ್ಯಾಪ್ತಿಯಲ್ಲಿ ಶೇ.67.77 ರಷ್ಟು ಮತದಾನವಾಗಿದೆ.
ಜಿ.ಪಂ.ಸಿಇಓ ವಿವಿಧ ಮತಗಟ್ಟೆಗೆ ಭೇಟಿ : ಸಾರ್ವತ್ರಿಕ ವಿಧಾನಸಭೆ ಚುನಾವಣೆ ಅಂಗವಾಗಿ ಇಂದು ಜಿಲ್ಲೆಯ 8 ವಿಧಾನಸಭಾ ಮತಕ್ಷೇತ್ರಗಳಲ್ಲಿ ಮತದಾನ ಜರುಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಅವರು, ವಿಜಯಪುರ ನಗರದ ಸರಕಾರಿ ಹೆಣ್ಣು ಮಕ್ಕಳ ಶಾಲೆ-1 ರ ಧ್ಯೇಯಾಧಾರಿತ ಮತಗಟ್ಟೆ, ಸರಕಾರಿ ಪಾಲಿಟೆಕ್ನಿಕ್ ಮಹಾವಿದ್ಯಾಲದಲ್ಲಿರುವ ವಿಶೇಷ ಚೇತನರ ಮತಗಟ್ಟೆ, ಸರಕಾರಿ ಉರ್ದು ಹೆಣ್ಣು ಮಕ್ಕಳ ಶಾಲೆ- 01, ದೌಲತ ಕೋಟೆ ಯಲ್ಲಿರುವ ಸಖಿ ಮತಗಟ್ಟೆ ಸೇರಿ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ತೃತೀಯ ಲಿಂಗಿಯಿಂದ ಮತದಾನ : ವಿಜಯಪುರ ನಗರದ ಸರಕಾರಿ ಹೆಣ್ಣು ಮಕ್ಕಳ ಶಾಲೆ ನಂಬರ್ 01 ರ ಮತಗಟ್ಟೆ ಸಂಖ್ಯೆ 57 ರಲ್ಲಿ ಲಿಂಗತ್ವ ಅಲ್ಪಸಂಖ್ಯಾತರು ತಮ್ಮ ಮತದಾನ ಹಕ್ಕು ಚಲಾಯಿಸಿ, ನಂತರ ಮತಗಟ್ಟೆಯಲ್ಲಿರುವ ಸೆಲ್ಪಿ ಸ್ಟ್ಯಾಂಡ್ ಮುಂದೆ ಪೆÇೀಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
ಅದರಂತೆ ಇಂಡಿ ವಿಧಾನಸಭಾ ಮತಕ್ಷೇತ್ರದ ಸಾಲೋಟಗಿ ಗ್ರಾಮ ಪಂಚಾಯಿತಿ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆ ಸಂಖ್ಯೆ 145ರಲ್ಲಿ ತೃತೀಯಲಿಂಗಿಯಾದ ಶಿವರಾಜ ಕರಾಳೆ ಮತದಾನ ಮಾಡುವ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ನವ ವಧು-ವರರಿಂದ ಮತದಾನ : ಇಂದು ವಿಜಯಪುರ ನಗರದಲ್ಲಿ ಮದುವೆಯಾದ ನವದಂಪತಿಗಳು ನಾಜೀಯಾ ಚಾಂದಸಾಬ ದಂದೊಟಿ ಮತ್ತು ಮುಬಾರಕ ಅಕ್ಬರ್ ಸನದಿ ಅವರು ನಗರದ ಸರಕಾರಿ ಕನ್ನಡ ಪ್ರಾಥಮಿಕ ಶಾಲೆ ನಂಬರ್ 09 ರ ಮತಗಟ್ಟೆ ಸಂಖ್ಯೆ 189ರಲ್ಲಿ ತಮ್ಮ ಮತವನ್ನು ಚಲಾಯಿಸಿದರು.
ಅದರಂತೆ ತಾಳಿಕೋಟಿ ಪಟ್ಟಣದ ಮತಗಟ್ಟೆ ಸಂಖ್ಯೆ-21 ರಲ್ಲಿ ನವ ವಧು-ವರರಾದ ಬಿರಾದಾರ ಕುಟುಂಬ ಪಟ್ಟಣದ ಶ್ರೀ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಮದುವೆ ನಿಶ್ಚಿಯಿಸಿದ್ದರು. ಮದುವೆ ಮುಗಿದ ನಂತರ ವಧು ರಕ್ಷಿತಾ ಅವರು ತಮ್ಮ ಪತಿ ಶರಣಬಸವ ಅವರ ಜೊತೆಗೂಡಿ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು.