ವಿಜಯಪುರ ಜಿಲ್ಲೆಯಲ್ಲಿ ಸಂಭ್ರಮದ ಎಳ್ಳ ಅಮವಾಸ್ಯೆ ಚರಗಾ

ವಿಜಯಪುರ,ಜ.12:ಜಿಲ್ಲೆಯಾದ್ಯಂತ ಎಳ್ಳ ಅಮವಾಸ್ಯೆ ಚರಗಾ ಚೆಲ್ಲುವ ಮೂಲಕ ಅನ್ನದಾತ ಭೂದೇವಿಗೆ ಪೂಜೆ ಸಲ್ಲಿಸಿ ಸಂಭ್ರಮಿಸಿದರು.

ಅನ್ನದಾತನ ಕುಟುಂಬದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಕಷ್ಟಪಟ್ಟು ಭೂಮಿಗೆ ಕಾಳು ಹಾಕಿ ಶ್ರಮಪಟ್ಟ ಕಾರಣ ರೈತನ ಹೊಲದಲ್ಲಿ ಬರದ ಮಧ್ಯೆದಲ್ಲಿಯೂ ಅಲ್ಪ ಸ್ಬಲ್ಪ ಬೆಳೆ ಬೆಳೆದು ನಿಂತಿದ್ದರೂ ನಿರಾಶೆಯಾಗದೇ ಕುಟುಂಬ ಸಮೇತ ಹೊಲಕ್ಕೆ ತೆರಳಿ ಹೊಲದಲ್ಲಿ ಭೂದೇವಿಗೆ ಪೂಜೆ ಸಲ್ಲಿಸಿ ಹೊಲದ ತುಂಬೆಲ್ಲ ಸಮೃದ್ಧಿ ಸಂಕೇತವಾಗಿ ಬೆಳೆಯಲ್ಲಿ ಆಹಾರ ಪದಾರ್ಥಗಳನ್ನು ಚೆರಗಾ ಚೆಲ್ಲಿ ಆನಂತರ ಎಲ್ಲರೂ ಸಜ್ಜೆ ರೊಟ್ಟಿ, ಶೇಂಗಾ ಹೋಳಿಗೆ, ಭಜ್ಜಿ ಮುಂತಾದ ತರೇಹವಾರಿ ಭಕ್ಷಗಳ ಸವಿ ಸವಿದರು. ರೈತರು ಹೊಲಕ್ಕೆ ತಮ್ಮ ಬಂಧುಬಳಗ ಮತ್ತು ಆತ್ಮೀಯ ಸ್ನೇಹಿತರನ್ನು ಕರೆದುಕೊಂಡು ಹೋಗಿ ಊಟದ ಸೊಬಗನ್ನು ಇನ್ನಷ್ಟು ಹೆಚ್ಚಿಸಿದರು.

ಬೆಳ್ಳಂಬೆಳಗ್ಗೆ ರೈತ ಮಹಿಳೆಯರು ನಸುಕಿನಲ್ಲಿಯೇ ಎದ್ದು ಪಕ್ವಾನ್ನ ಮಾಡಿಕೊಂಡು ಎತ್ತಿನ ಚಕ್ಕಡಿಯಲ್ಲಿ ಸಾಲು ಸಾಲು ಚಕ್ಕಡಿಗಳು ಹೊಲಕ್ಕೆ ತೆರಳುವುದನ್ನು ನೋಡುವುದೆ ಒಂದು ಹಬ್ಬ. ಕೆಲ ಅನುಕೂಲಸ್ಥರು ಕಾರ್. ಟ್ರ್ಯಾಕ್ಟರ್ ಮುಂತಾದ ವಾಹನಗಳ ಮೂಲಕ ಮಧ್ಯಾಹ್ನ ಹೊಲಕ್ಕೆ ತೆರಳಿ ಸಂಜೆಯಾಗುತ್ತಿದ್ದಂತೆಯೇ ಖುಷಿಯಲ್ಲಿ ರೃತರು ಮನೆಗೆ ತೆರಳಿದರು.