ವಿಜಯಪುರ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆ: ಸಿಡಿಲಿಗೆ ಆಕಳು, ಆಡು ಬಲಿ, ಬಿರು ಗಾಳಿಗೆ ಲಿಂಬೆ ಬೆಳೆ ನಾಶ, ಅಪಾರ ಹಾನಿ

ವಿಜಯಪುರ, ಮೇ.12:ಜಿಲ್ಲೆಯ ಹಲವೆಡೆ ನಿನ್ನೆ ಸಂಜೆ ಬಿರುಗಾಳಿ ಸಹಿತ ಸುರಿದ ಸಾಧಾರಣ ಮಳೆಯಲ್ಲಿ ಸಿಡಿಲು ಬಡಿದು ಒಂದು ಆಕಳು, ಎರಡು ಆಡಿನ ಮರಿಗಳು ಮೃತಪಟ್ಟು ಓರ್ವನಿಗೆ ಸಣ್ಣ, ಪುಟ್ಟ ಗಾಯಗಳಾಗಿವೆ. ಭಾರಿ ಪ್ರಮಾಣದಲ್ಲಿ ಬೀಸಿದ ಬಿರುಗಾಳಿಗೆ ಅಲ್ಲಲ್ಲಿ ಗಿಡ,ಮರ, ವಿದ್ಯುತ್ ಕಂಬಗಳು ಧರೆಗುರುಳಿವೆ. ಲಿಂಬೆ ಗಿಡಗಳು ಬೇರು ಸಹಿತ ನೆಲಕ್ಕುರುಳಿ ಅಪಾರ ಹಾನಿ ಸಂಭವಿಸಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ವಿಜಯಪುರ ತಾಲ್ಲೂಕಿನ ಕವಲಗಿ ಗ್ರಾಮದ ಹನಮಂತ ಛಲವಾದಿ ಅವರ ಜಮೀನಿನಲ್ಲಿ ಸಿಡಿಲು ಬಡಿದು ಒಂದು ಆಕಳು ಮೃತಪಟ್ಟಿದೆ.
ಕೊಲ್ಹಾರ ತಾಲ್ಲೂಕಿನ ಹಾಲಿಹಾಳ ಗ್ರಾಮದ ಸಾಬಣ್ಣ ಬಿರಾದಾರ ಅವರ ಎರಡು ಆಡಿನ ಮರಿಗಳು ಸಿಡಿಲು ಬಡಿದು ಸತ್ತಿವೆ. ಅದೇ ಗ್ರಾಮದ ಶಿವಸಂಗಪ್ಪ ಬೇವಿನಮಟ್ಟಿ ಅವರಿಗೆ ಸಿಡಿಲು ಬಡಿದು ಸಣ್ಣ, ಪುಟ್ಟ ಗಾಯಗಳಾಗಿವೆ.
ಬಳಬಟ್ಟಿ ಗ್ರಾಮದ ಮಲ್ಲಪ್ಪ ಕೊಪ್ಪ ಅವರಿಗೆ ಸೇರಿದ ಕೋಳಿ ಫಾರ್ಮ್ ಗೆ ಹೊದಿಸಲಾದ ಮೇಲ್ಛಾವಣಿ ತಗಡು ಗಾಳಿಗೆ ಹಾರಿ ದೂರ ಬಿದ್ದಿವೆ.
ಇಂಡಿ ಹೊರ ವಲಯದ ಸಂಜು ವಾಘಮೋಡೆ ಅವರ ಎರಡು ಎಕರೆ ಜಮೀನಿನಲ್ಲಿ ಬೆಳೆದು ನಿಂತಿರುವ ಲಿಂಬೆ ಫಸಲು ಬೇರು ಸಹಿತ ಕಿತ್ತು ಅಪಾರ ಹಾನಿಯಾಗಿದೆ.
ಇಂಡಿ ಹಾಗೂ ಚಡಚಣ, ವಿಜಯಪುರ ಸೇರಿದಂತೆ ಹಲವೆಡೆ ಮರಗಳು ಧರೆಗುರುಳಿವೆ. ಕೆಲವು ಕಡೆ ವಿದ್ಯುತ್ ಕಂಬಗಳೂ ಧರೆಗುರುಳಿವೆ. ವಿದ್ಯುತ್ ಸಂಪರ್ಕ ಕಡಿತವಾಗಿದೆ.
ವಿಜಯಪುರ ನಗರದ ಸುತ್ತಮುತ್ತಲು ಭಯಂಕರ ಸದ್ದು ಮಾಡುತ್ತಿದ್ದ ಸಿಡಿಲು, ಮಿಂಚಿನ ಆರ್ಭಟಕ್ಕೆ ಮನೆಯ ಮೇಲ್ಛಾವಣಿ ಮೇಲೆ ಮಲಗಿದ್ದ ಜನರು ಹೆದರಿ ಮನೆಯಲ್ಲಿ ಹೋಗಿ ರಕ್ಷಣೆ ಪಡೆದರು.