ವಿಜಯಪುರ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ಎರಡು ಬಾರಿ ಭೂಕಂಪನ: ಜನರಲ್ಲಿ ಆತಂಕ

ವಿಜಯಪುರ, ಜ.29:ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಎರಡು ಬಾರಿ ಲಘು ಭೂಕಂಪನ ಸಂಭವಿಸಿದ್ದು, ರಾತ್ರಿ ಜನರು ಗಾಬರಿಯಿಂದ ಮನೆಯಿಂದ ಹೊರಗಡೆ ಓಡಿ ಬಂದರು.
ಸೋಮವಾರ ನಸುಕಿನ ಸಮಯ 12-23 ಹಾಗೂ 1-15 ಕ್ಕೆ ಎರಡು ಬಾರಿ ಲಘು ಭೂಕಂಪನ ಸಂಭವಿಸಿದೆ.
ರಾತ್ರಿ ನಿದ್ದೆ ಮಂಪರಿನಲ್ಲಿದ್ದ ಜನರಿಗೆ ಭಾರಿ ಸದ್ದಿನೊಂದಿಗೆ ಭೂಕಂಪನ ಸಂಭವಿಸಿದೆ. ಈ ಭೂಕಂಪನದಿಂದ ಜನರು ಬೆಚ್ವಿ ಬಿದ್ದು ಮನೆಯಿಂದ ಹೊರ ಓಡಿ ಬಂದಿದ್ದಾರೆ.
ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮ ಪಂಚಾಯತಿ ವ್ಯಾಪ್ತಿ ಪ್ರದೇಶ ಎರಡು ಭೂಕಂಪನ ಕೇಂದ್ರ ಬಿಂದುವಾಗಿದ್ದು, ಮೊದಲನೆ ಭೂಕಂಪನ ಆಳ 5 ಕಿ.ಮಿ ಹಾಗೂ ಎರಡನೆ ಭೂಕಂಪನ 7 ಕಿ.ಮಿ ಆಳದವರೆಗೆ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.6. ತೀವ್ರತೆ ದಾಖಲಾಗಿದೆ.
ವಿಜಯಪುರ, ಮನಗೂಳಿ ಸುತ್ತಲಿನ ಪ್ರದೇಶದಲ್ಲಿ ಜನರಿಗೆ ಭೂಮಿ ನಡುಗಿದ ಅನುಭವವಾಗಿದೆ. ರಾತ್ರಿ ಹೊತ್ತು ಬಹುತೇಕ ಜನರು ನಿದ್ದೆಗೆ ಜಾರಿದ್ದರಿಂದ ಬಹಳಷ್ಟು ಮಂದಿಗೆ ಭೂಕಂಪನ ಅನುಭವಕ್ಕೆ ಬಂದಿಲ್ಲ.
ತೀರ ಇತ್ತೀಚಿಗೆ ಜನವರಿ 25ರಂದು ರಾತ್ರಿ 8-30ರ ಸುಮಾರಿಗೆ ಭೂಕಂಪನ ಸಂಭವಿಸಿತ್ತು. ಕಳೆದ ಹಲವಾರು ವರ್ಷಗಳಿಂದ ಜಿಲ್ಲೆಯಲ್ಲಿ ಆಗಾಗ ಭೂಕಂಪನ ಸಂಭವಿಸುತ್ತಿದ್ದು, ಜನರು ಆತಂಕಕ್ಕೀಡಾಗಿದ್ದಾರೆ.
ಕೆಎ???ನ್ ಡಿಎಂಸಿ ಈ ಎರಡು ಭೂಕಂಪಗಳನ್ನು ಖಚಿತಪಡಿಸಿದ್ದು, ಕಂಪನ ತೀವ್ರತೆ ಪ್ರಮಾಣ ಕಡಮೆಯಾಗಿದ್ದರಿಂದ ಜನರು ಯಾವುದೇ ರೀತಿಯ ಆತಂಕಕ್ಕೀಡಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದೆ.