ವಿಜಯಪುರ ಜಿಲ್ಲೆಗೆ ಬಂಪರ್ ಬಜೆಟ್: ಕಾಂತಾ ನಾಯಕ

ವಿಜಯಪುರ,ಫೆ.17 :ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಮ್ಮ ವಿಜಯಪುರ ಜಿಲ್ಲೆಗೆ ಬಂಪರ್ ಬಜೆಟ್ ನೀಡಿದ್ದು ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಪಾಲಿಸಿ ರಾಜ್ಯ ಬಜೆಟ್ ಮಂಡಿಸುವ ಮೂಲಕ ಕಾಂಗ್ರೆಸ್ ಸರಕಾರ ಸದಾ ಜನಪರ ಎಂಬುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಗೆ ತೋಟಗಾರಿಕೆ ಕಾಲೇಜು, ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ, ಹೊಸ ಜಿಲ್ಲಾ ಮತ್ತು ತಾಲ್ಲೂಕು ನವ ಕಚೇರಿಗಳ ನಿರ್ಮಾಣ, ಆಹಾರ ಪಾರ್ಕ ಸ್ಥಾಪನೆ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯಕ್ಕೆ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಬದುಕು-ಬರಹ ಕುರಿತು ಅಧ್ಯಯನ ಪೀಠ ಮತ್ತು ಕೆರೆ-ಕಟ್ಟೆಗಳ ಅಂತರ್ಜಾಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮ ಹೀಗೆ ಹತ್ತು ಹಲವಾರು ಯೋಜನೆಗಳನ್ನು ನೀಡಿ ವಿಜಯಪುರ ಜಿಲ್ಲೆಗೆ ಬರಪೂರ್ ಬಜೆಟ್ ನೀಡಿದ್ದು ಸಂತಸದ ವಿಷಯ ಎಂದು ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಅತ್ಯಂತ ಹಿಂದುಳಿದ ನಮ್ಮ ಜಿಲ್ಲೆಗೆ ಈ ಬಜೆಟ್‍ನಲ್ಲಿ ಪ್ರಮುಖ ಸ್ಥಾನ ನೀಡಲಾಗಿದ್ದು, ನಮ್ಮ ಜಿಲ್ಲೆಯ ಹೆಮ್ಮೆ ಮತ್ತು ಸಂಸ್ಕøತಿಯ ನಾಯಕ ಅಣ್ಣ ಬಸವಣ್ಣನವರ ಕುರಿತಾದ ವಿಚಾರಗಳನ್ನು ಮತ್ತು ಅವರ ಸಂದೇಶಗಳ ಕುರಿತು ಬೆಳಕು ಚೆಲ್ಲಲು ರಾಜ್ಯದ ಎಲ್ಲ ಶಾಲಾ-ಕಾಲೇಜುಗಳಲ್ಲಿ ಕಾರ್ಯಕ್ರಮ ರೂಪಿಸುವ ಮೂಲಕ ವಿಜಯಪುರ ಜಿಲ್ಲೆಯನ್ನು ರಾಜ್ಯಮಟ್ಟದಲ್ಲಿ ಗುರುತಿಸುವ ಕಾರ್ಯವಾಗಿದ್ದು ಖುಷಿಯ ವಿಚಾರ ಎಂದಿದ್ದಾರೆ.
ಇನ್ನು 2024-25ನೇ ರಾಜ್ಯ ಬಜೆಟ್ ಸಂಪೂರ್ಣ ಮಹಿಳಾ ಪರ, ಮಕ್ಕಳ ಅಭಿವೃದ್ಧಿ ಪರ, ರೈತಪರ, ಯುವಜನತೆಪರ ಸರ್ವ ಜನಾಂಗಕ್ಕೂ ಸಮಪಾಲಿನ ಮತ್ತು ಸಮತೋಲನ ಬಜೆಟ್ ಮಂಡಿಸಿದ್ದು ಇದೊಂದು ಅಭಿವೃದ್ಧಿಪರ ಬಜೆಟ್ ಆಗಿದೆ.
ಮಹಿಳೆಯರ ಆರ್ಥಿಕ ಸ್ವಾತಂತ್ರ್ಯಕ್ಕೆ ಬೆಂಬಲ ನೀಡುವ ಮಹತ್ವಾಕಾಂಕ್ಷಿ ಯೋಜನೆ ಗೃಹಲಕ್ಷ್ಮಿ ಯೋಜನೆಯಲ್ಲಿ ಈವರೆಗೆ 11,726 ಕೋಟಿ ರೂ.ಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದ್ದು, 2024-25ನೇ ಸಾಲಿನಲ್ಲಿ 28,608 ಕೋಟಿ ರೂ. ಮೀಸಲಿಡಲಾಗಿದೆ. ಮತ್ತು ಮಹಿಳಾ ಸ್ವ-ಸಹಾಯ ಗುಂಪುಗಳಿಗೆ 10 ಕೋಟಿ ನೀಡಲಾಗಿದ್ದು, ಮಹಿಳೆಯರ ಸ್ವಾವಲಂಬಿ ಬದುಕಿಗಾಗಿ ಗ್ರಾಮೀಣ ಭಾಗದ ಮಹಿಳೆಯರಿಗೆ “ಕೆಫೆ ಸಂಜೀವಿನಿ” ಎಂಬ ಯೋಜನೆಯನ್ನು ನಿರ್ಮಿಸಿದ್ದು ಮತ್ತು ಮಹಿಳಾ ಕೃಷಿಕರಿಗೆ ಹೈನುಗಾರಿಕೆಗಾಗಿ ಶೇ. 6ರಷ್ಟು ಬಡ್ಡಿದರದಲ್ಲಿ ಸಾಲ ನೀಡುವುದು ಮತ್ತು ಸರಿಯಾದ ಸಮಯದಲ್ಲಿ ಮರುಪಾವತಿ ಮಾಡಿದರೆ ಪ್ರೋತ್ಸಾಹಧನ ವಿತರಣೆ, ರಾಜ್ಯದ 14 ಸ್ಥಳಗಳಲ್ಲಿ ಮಹಿಳಾ ಕ್ರೀಡಾ ವಸತಿ ನಿಲಯಗಳ ಸ್ಥಾಪನೆ, 2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 86,423 ಕೋಟಿ ರೂ.ಗಳನ್ನು ಒದಗಿಸುವುದು ಮಕ್ಕಳ ಉದ್ದೇಶಿತ ಯೋಜನೆಗಳಿಗೆ 2024-25ನೇ ಸಾಲಿನಲ್ಲಿ 54,617 ಕೋಟಿ ರೂ.ಗಳನ್ನು ಒದಗಿಸುವುದು ಹೀಗೆ ಮಹಿಳಾ ಅಭಿವೃದ್ಧಿಗಾಗಿ ಹತ್ತು ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ರೈತರಿಗಾಗಿ “ರೈತ ಸಮೃದ್ಧಿ” ಯೋಜನೆ, ಕೃಷಿ ಅಭಿವೃದ್ಧಿ ಪ್ರಾಧಿಕಾರ, ಎತ್ತಿನಹೊಳೆ ಯೋಜನೆ ವಿಸ್ತರಣೆಗೆ ಕ್ರಮ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ರೈತರಿಗಾಗಿ ರೂಪಿಸಲಾಗಿದೆ. ಆರೋಗ್ಯ, ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಮೀನುಗಾರಿಗೆ, ಜಲಸಂಪನ್ಮೂಲ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ, ಸಾರಿಗೆ, ವಸತಿ, ಕಂದಾಯ, ಆರೋಗ್ಯ, ಸಮಾಜ ಕಲ್ಯಾಣ ಇಲಾಖೆ ಹೀಗೆ ಹತ್ತು ಹಲವಾರು ಕ್ಷೇತ್ರಗಳಿಗೆ ಅಭಿವೃದ್ಧಿಪರ ಅನುದಾನವನ್ನು ಎಲ್ಲ ವಿಭಾಗಗಳಿಗೂ ಯೋಜನೆಗಳನ್ನು ರೂಪಿಸುವ ಮೂಲಕ ಸಮಗೃ ಅಭಿವೃದ್ಧಿಗೆ ನಮ್ಮ ಸರಕಾರ ಒತ್ತು ನೀಡುವ ಮೂಲಕ ಜನರ ವಿಶ್ವಾಸವನ್ನು ಮತ್ತೊಮ್ಮೆ ಗೆದ್ದಿದೆ ಎಂದು ತಿಳಿಸಿದ್ದಾರೆ.