ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ 14.30 ಕೋಟಿ ರೂ. ನಿವ್ವಳ ಲಾಭ:ಪಾಟೀಲ

ವಿಜಯಪುರ ಸೆ.23: ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಸನ್ 2022-23ನೇ ಸಾಲಿನಲ್ಲಿ ಬ್ಯಾಂಕು ತನ್ನ ಎಲ್ಲ ಕಾರ್ಯಕ್ರಮಗಳನ್ನು ವ್ಯವಸ್ಥಿತ ರೀತಿಯಲ್ಲಿ ನಿರ್ವಹಿಸಿ, ಆದಾಯ ತೆರಿಗೆ ಪೂರ್ವ ರೂ.19.31 ಕೋಟಿ ಲಾಭಗಳಿಸಿದ್ದು, ನಿಯಮಾನುಸಾರ ರೂ.5.01 ಕೋಟಿ ತೆರಿಗೆ ಪಾವತಿಸಿ ನಂತರ ರೂ.14.30 ಕೋಟಿ ನಿವ್ವಳ ಲಾಭ ಗಳಿಸಿದೆ. ಇದು ಬ್ಯಾಂಕಿನ ಇತಿಹಾಸದಲ್ಲಿಯೇ ಗಳಿಸಿದ ಗರಿಷ್ಠ ವಾರ್ಷಿಕ ನಿವ್ವಳ ಲಾಭವಾಗಿದ್ದು, ದಾಖಲಾರ್ಹ ಸಾಧನೆಯಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷರೂ ಆದ ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.

ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ವಿಜಯಪುರ ತಾಲೂಕಿನ ನಾಗಠಾಣ, ಮಮದಾಪೂರ ಹಾಗೂ ಮುದ್ದೇಬಿಹಾಳ ತಾಲೂಕಿನ ಹಿರೂರ ಗ್ರಾಮದಲ್ಲಿ ತನ್ನ ನೂತನ ಶಾಖೆಗಳನ್ನು ಕಾರ್ಯಾರಂಭಗೊಳಿಸಿದ್ದು, ಈಗ ಜಿಲ್ಲೆಯಾದ್ಯಂತೆ ಒಟ್ಟು 46 ಶಾಖೆಗಳನ್ನು ಹೊಂದಿದೆ. ಬ್ಯಾಂಕು ಇನ್ನೂ 10 ಹೊಸ ಶಾಖೆಗಳನ್ನು ಆರಂಭಿಸಲು ಅನುಮತಿ ಕೋರಿ ಆರ್.ಬಿ.ಆಯ್.ಗೆ. ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು.

ಬ್ಯಾಂಕ್ ಕೃಷಿಗೆ ಮೊದಲು ಆದ್ಯತೆಯನ್ನಿತ್ತು. ವಿವಿಧ ಕೃಷಿಯೇತರ ಉದ್ದೇಶಗಳಿಗಾಗಿ ಸಾಲ ನೀಡುತ್ತಿದೆ. ಸನ್ 2022-23ನೇ ಸಾಲಿನಲ್ಲಿ ಕೃಷಿಗಾಗಿ ರೂ.1562.79 ಕೋಟಿ ಮತ್ತು ಕೃಷಿಯೇತರ ಉದ್ದೇಶಗಳಿಗಾಗಿ ರೂ.1124.72 ಕೋಟಿ ಸೇರಿದಂತೆ ಒಟ್ಟು ರೂ.2687.51 ಕೋಟಿ ಸಾಲ ವಿತರಿಸಿದೆ. ಸನ್ 2021-22ನೇ ಸಾಲಿನಲ್ಲಿ ಬ್ಯಾಂಕಿನ ಒಟ್ಟು ವ್ಯವಹಾರದ ಗಾತ್ರ ರೂ.5464.06 ಕೋಟಿಗಲಷ್ಟಿದ್ದು, ಸನ್ 2022-23ನೇ ಸಾಲಿನಲ್ಲಿ ರೂ.6082.88 ಕೋಟಿಗಳಷ್ಟಾಗಿದೆ. ಪ್ರಸ್ತಕ ವರ್ಷದಲ್ಲಿ ರೂ.618.82 ಕೋಟಿಗಳಷ್ಟು ಹೆಚ್ಚಳವಾಗಿದೆ.

ಬಾಗಲಕೋಟೆ ಹಾಗೂ ವಿಜಯಪುರ ಸಕ್ಕರೆ ಕಾರ್ಖಾನೆಗಳಿಗೆ ಡಿಸಿಸಿ ಬ್ಯಾಂಕ್ ಮೂಲಕ ಆರ್ಥಿಕ ಸಹಕಾರ ಒದಗಿಸಲಾಗಿದೆ. ಈ ವರ್ಷದಲ್ಲಿ 17229 ಹೊಸ ರೈತ ಸದಸ್ಯರಿಗೆ ರೂ.125.40 ಕೋಟಿ ಬೆಳೆ ಸಾಲ ಹಾಗೂ 1948 ರೈತರಿಗೆ ರೂ.56.06 ಕೋಟಿ ಮಧ್ಯಮಾವಧಿ ಕೃಷಿ ಸಾಲ ವಿತರಿಸಲಾಗಿದೆ. ಫ್ಯಾಕ್ಸುಗಳ ವ್ಯಾಪಾರ ಅಭಿವೃದ್ದಿ ಯೋಜನೆಯನ್ನು ಅಳವಡಿಸಲಾಗಿದ್ದು, ದಿನಾಂಕ : 31-03-2023ಕ್ಕೆ ಸಂಘಗಳ ಠೇವಣಿ ರೂ.870.46 ಕೋಟಿಗಳಷ್ಟಿದೆ. ಪ್ರಸಕ್ತ ಸಾಲಿನಲ್ಲಿ ಲೆಕ್ಕ ಪರಿಶೋಧನೆ ಪೂರ್ವ 193 ಸಂಘಗಳು ಲಾಭದಲ್ಲಿದ್ದರೆ 79 ಸಂಘಗಳು ಹಾನಿಯಲ್ಲಿವೆ. ಹಾನಿಯಲ್ಲಿರುವ ಸಂಘಗಳನ್ನು ಲಾಭದಲ್ಲಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 272 ಕಾರ್ಯನಿರತ ಫ್ಯಾಕ್ಸುಗಳ ಪೈಕಿ 235 ಸ್ವಂತ ಕಛೇರಿ, ಗೋಡಾವನ್ ಹೊಂದಿದ್ದು, 20 ಫ್ಯಾಕ್ಸುಗಳಿಗೆ ನಿವೇಶನವಿದೆ. 17 ಫ್ಯಾಕ್ಸುಗಳು ಮಾತ್ರ ನಿವೇಶನರಹಿತವಾಗಿವೆ. ಎಲ್ಲ ಸಂಘಗಳಿಗೂ ಸ್ವಂತ ಕಟ್ಟಡ ನಿರ್ಮಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.

ಶತಮಾನೋತ್ಸವ : ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಶತಮಾನೋತ್ಸವ ಸವಿನೆನಪಿನಲ್ಲಿ ನಿರ್ಮಿಸಲಾದ ನೂತನ ಕಟ್ಟಡ ಪೂರ್ಣಗೊಂಡಿದ್ದು, ಶತಮಾನೋತ್ಸವ ಸಮಾರಂಭ ಬರುವರ ಜನವರಿಯೊಳಗೆ ಹಮ್ಮಿಕೊಂಡು ಸಮಾರಂಭಕ್ಕೆ ರಾಜ್ಯದ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಹಾಗೂ ಸಹಕಾರ ಸಚಿವರನ್ನು ಆಹ್ವಾನಿಸಲಾಗುವುದು ಎಂದು ಅವರು ಹೇಳಿದರು.

ದುಡಿಯುವ ಬಂಡಾವಳ 5 ಸಾವಿರ ಕೋಟಿ ರೂ.ಗೆ ಹೆಚ್ಚಳ : ಪ್ರಸಕ್ತ 2023-24ನೇ ಸಾಲಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ನೀಡುವುದರೊಂದಿಗೆ ಸಮರ್ಪಕ ಕಾರ್ಯನಿರ್ವಹಣೆಗೆ ಕ್ರಮ ಕೈಗೊಂಡು ಈಗಿರುವ 4612.74 ಕೋಟಿ ರೂ. ದುಡಿಯುವ ಬಂಡವಾಳವನ್ನು 5 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಿ ಒಟ್ಟು 6620 ಕೋಟಿ ರೂ. ವ್ಯವಹಾರ ನಿರ್ವಹಿಸಿ 15.50ಕೋಟಿ ರೂ.ನಿವ್ವಳ ಲಾಭ ಗಳಿಸಲು ಯೋಜನೆ ರೂಪಿಸಲಾಗಿದೆ. ಇದರೊಂದಿಗೆ ನೆಟ್ ಬ್ಯಾಂಕಿಂಗ್ ಸೌಲಭ್ಯ, ಕೃಷಿ ಸಾಲ ವಿಸ್ತರಣೆ, ಕೃಷಿಕರಿಗೆ ತೋಟದ ಮನೆ ನಿರ್ಮಾಣ ಸಾಲ, ರೈತ ಕಲ್ಯಾಣ ನಿಧಿ, ಸಾಲ ಮಿತಿಯಲ್ಲಿ ಹೆಚ್ಚಳ, ಕೃಷಿಯೇತರ ಪತ್ತಿನ ಸಹಕಾರ ಸಂಘಗಳಿಗೆ ಸಾಲ ಯೋಜನೆಯನ್ನು ಆರಂಭಿಸಲಾಗುವುದು ಎಂದು ಅವರು ಹೇಳಿದರು.

ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ, ನಿರ್ದೇಶಕರುಗಳಾದ ಶೇಖರ ದಳವಾಯಿ, ಸೋಮನಗೌಡ ಎನ್.ಬಿರಾದಾರ, ಕಲ್ಲನಗೌಡ ಬಿರಾದಾರ, ಹಣಮಂತರಾಯ ಆರ್.ಪಾಟೀಲ, ಗುರುಶಾಂತ ನಿಡೋಣಿ, ಸುರೇಶ ಬಿರಾದಾರ, ರಾಜೇಶ್ವರಿ ಹೆಬ್ಬಾಳ, ಉಪನಿಬಂಧಕರಾದ ಶ್ರೀಮತಿ ಎಸ್.ಕೆ.ಭಾಗ್ಯಶ್ರೀ, ಎಸ್.ಎಸ್.ಶಿಂಧೆ, ಮುಖ್ಯ ಕಾರ್ಯನಿವಾಹಕ ಅಧಿಕಾರಿ ಎಸ್.ಡಿ.ಬಿರಾದಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.