ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಯುವಂತೆ ಆಗ್ರಹ

ವಿಜಯಪುರ, ಸೆ.19- ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ತಡೆಗಟ್ಟುವಂತೆ ಭಾರತೀಯ ದ್ರಾವಿಡ ಸೇನಾ ಬೆಂಗಳೂರು (ರಿ) ವತಿಯಿಂದ ಆರೋಗ್ಯ ಅಧಿಕಾರಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ ಇವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಮೇಶ ಚಲವಾದಿ (ಕವಲಗಿ) ಮಾತನಾಡಿ ವಿಜಯಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಳೆದ ದಿನಗಳಿಂದ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಆಸ್ಪತ್ರೆಯ ಸಿಬ್ಬಂದಿಗಳು ಆಸ್ಪತ್ರೆಗೆ ಬರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೆ ಅಸಭ್ಯ ವರ್ತನೆ ತೋರುತ್ತಿದ್ದಾರೆ.
ರೋಗಿಗಳಿಂದ ಹಣ ವಸೂಲಿ ಮಾಡುವುದು, ಹೆರಿಗೆಗೆ ಬರುವ ರೋಗಿಗಳಿಂದ ಹಣ ವಸೂಲಿ ದಂಧೆಯಲ್ಲಿ ತೊಡಗಿದ್ದಾರೆ. ವಿಜಯಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯು ರಾಜ್ಯದ 2ನೇ ಸುಸಜ್ಜಿತ ಆಸ್ಪತ್ರೆ ಎಂದು ಬಿರುದು ಪಡೆದುಕೊಂಡರೂ ಸಹ ಇಲ್ಲಿ ಸುರಕ್ಷತೆಗೆ ಯಾವುದೇ ವ್ಯವಸ್ಥೆ ಮಾಡಿರುವದಿಲ್ಲ. ಇನ್ನು ಇಲ್ಲಿಯ ಸೆಕ್ಯೂರಿಟಿ ಗಾರ್ಡಗಳು ಸರಿಯಾದ ಸಮಯಕ್ಕೆ ಹಾಜರಾಗದೇ ಕರ್ತವ್ಯ ಎಸಗಿ ಜಿಲ್ಲಾ ಆಸ್ಪತ್ರೆಯ ಸುರಕ್ಷತೆಗೆ ಕಡೆಗೆ ಗಮನ ಹರಿಸುತ್ತಿಲ್ಲ. ಇವರ ಸರಿಯಾದ ಕಾರ್ಯನಿರ್ವಹಣೆ ಇಲ್ಲದೇ ಇರುವ ಕಾರಣದಿಂಧ ಆಸ್ಪತ್ರೆಯಲ್ಲಿ ಹಚ್ಚಿರುವ ದ್ವಿಚಕ್ರ ವಾಹನಗಳು ಕಳುವು ಆಗುತ್ತಿವೆ. ಆದ್ದರಿಂದ ಭ್ರಷ್ಟಾಚಾರವನ್ನು ತಡೆದು ಜಿಲ್ಲಾ ಆಸ್ಪತ್ರೆಯ ಮೂಲಭೂತ ಸೌಲಬ್ಯಗಳನ್ನು ಜನರಿಗೆ ಒದಗಿಸಿಕೊಡುವಂತೆ ಆಗ್ರಹಿಸಿದರು. ಒಂದುವೇಳೆ ಈ ಬಗ್ಗೆ ಕ್ರಮ ಕೈಗೊಳ್ಳದೇ ಹೋದಲ್ಲಿ ಸಂಘಟನೆಯ ವತಿಯಿಂದ ಉಗ್ರ ಹೋರಾಟ ಮಾಡಲಾಗುವದು ಎಂದು ತಿಳಿಸಿದರು.