ವಿಜಯಪುರದಲ್ಲಿ 2 ದಿನಗಳ ಅಂಗನವಾಡಿ ನೌಕರರ ಪ್ರಥಮ ರಾಜ್ಯ ಸಮ್ಮೇಳನ

ಕಲಬುರಗಿ,ನ.03: ಅಂಗನವಾಡಿ ನೌಕರರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಹಲವು ದಶಕಗಳಿಂದಲೂ ದಿವ್ಯ ನಿರ್ಲಕ್ಷ್ಯ ವಹಿಸುತ್ತಾ ಬಂದಿವೆ. ಈ ನೌಕರರ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸರಕಾರವನ್ನು ಒತ್ತಾಯಿಸುವ ಕುರಿತು ಚರ್ಚಿಸುವುದು ಮತ್ತು ಅಂಗನವಾಡಿ ನೌಕರರ ಸಂಘಟನೆಯನ್ನು ತಳಮಟ್ಟದಿಂದ ಬಲಿಷ್ಠಗೊಳಿಸಿಕೊಂಡು ಮುಂದಿನ ಹೋರಾಟಗಳಿಗೆ ಅಣಿಯಾಗುವ ಉದ್ದೇಶದಿಂದ ಇದೇ ನವೆಂಬರ್ 5-6ರಂದು ವಿಜಯಪುರ ನಗರದಲ್ಲಿ ಎಐಯುಟಿಯುಸಿಗೆ ಸಂಯೋಜಿತವಾದ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದಿಂದ ಅಂಗನವಾಡಿ ನೌಕರರ ಪ್ರಥಮ ರಾಜ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿ.ಜಿ. ದೇಸಾಯಿ ಅವರು ತಿಳಿಸಿದ್ದಾರೆ.
ಸಮ್ಮೇಳನದ ಬಹಿರಂಗ ಅಧಿವೇಶನವನ್ನು ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯುನಿಯನ್ ಸೆಂಟರ್ (ಎಐಯುಟಿಯುಸಿ)ನ ಅಖಿಲ ಭಾರತ ಅಧ್ಯಕ್ಷ ಕಾಮ್ರೇಡ್ ಕೆ. ರಾಧಾಕೃಷ್ಣ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯೂನಿಸ್ಟ್ (ಎಸ್‍ಯುಸಿಐ-ಸಿ) ಕಮ್ಯೂನಿಷ್ಟ್ ಪಕ್ಷದ ರಾಜ್ಯ ಕಾರ್ಯದರ್ಶಿ ಕಾ. ಕೆ. ಉಮಾ, ಅತಿಥಿಗಳಾಗಿ ಎಐಯುಟಿಯುಸಿ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್, ಸ್ಕೀಂವರ್ಕರ್ಸ್ ಫೆಡರೇಶನ್‍ನ ರಾಜ್ಯ ಅಧ್ಯಕ್ಷೆ ಡಿ. ನಾಗಲಕ್ಷ್ಮೀರವರು ಆಗಮಿಸುವರು. ಸಂಘದ ಗೌರವಾಧ್ಯಕ್ಷ ಕಾ. ಕೆ.ವಿ ಭಟ್, ರಾಜ್ಯ ಕಾರ್ಯದರ್ಶಿ ರಮಾ. ಟಿ. ಸಿ. ಮತ್ತು ಖಜಾಂಚಿ ಎಮ್. ಉಮಾದೇವಿಯವರು ಭಾಷಣಕಾರರಾಗಿ ಭಾಗವಹಿಸಲಿಸದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘದ ರಾಜ್ಯ ಅಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿಯವರು ವಹಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಬೆಳಿಗ್ಗೆ 10.30ಕ್ಕೆ ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ್ ವೃತ್ತ, ಗಾಂಧಿವೃತ್ತ, ಸರಾಫ್ ಬಜಾರ್, ಸಿದ್ದೇಶ್ವರ್ ಕಲಾಭವನ, ಗಣಪತಿ ಚೌಕ್, ಮೂಲಕ ಎಪಿಎಮ್‍ಸಿಯ ನೀಲಕಂಠೇಶ್ವರ್ ಮಂಗಲ ಕಾರ್ಯಾಲಯದವರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಸಾವಿರಾರು ಅಂಗನವಾಡಿ ನೌಕರರ ಬೃಹತ್ ಮೆರವಣಿಗೆ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಅಂಗನವಾಡಿ ನೌಕರರ ಎಲ್ಲಾ ಜ್ವಲಂತ ಸಮಸ್ಯೆಗಳ ಕುರಿತು ಮತ್ತು ಅವುಗಳ ಪರಿಹಾರದ ಕುರಿತು ಚರ್ಚಿಸಲಾಗುವುದು ಹಾಗು ಈ ಜ್ವಲಂತ ಸಮಸ್ಯೆಗಳ ವಿರುದ್ದ ರಾಜ್ಯವ್ಯಾಪಿ ಬಲಿಷ್ಠ ಹೋರಾಟವನ್ನು ಬೆಳೆಸುವ ಕುರಿತು ಮುಂದಿನ ರೂಪುರೇಷೆಗಳನ್ನು ಈ ಸಮ್ಮೇಳನದಲ್ಲಿ ನಿರ್ಧರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಸರ್ಕಾರದ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಪರಿಗಣಿಸಬೇಕು ಮತ್ತು ಇಲಾಖೆಯು ಈ ವೃಂದಗಳ ನೌಕರರಿಗೆ ನೀಡುವ ಎಲ್ಲ ಶಾಸನಬದ್ದ ಸೌಕರ್ಯಗಳನ್ನು ನೀಡಬೇಕು. ಅಥವಾ ಕಾರ್ಯಕರ್ತೆಯರಿಗೆ 25,000 ಹಾಗೂ ಸಹಾಯಕಿಯರಿಗೆ 21000 ರೂ.ಗಳ ಮಾಸಿಕ ವೇತನ ನೀಡಬೇಕು. ಅಥವಾ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ (ಐಎಲ್‍ಓ) ಶಿಫಾರಸ್ಸಿನಂತೆ ಇವರನ್ನು ಕಾರ್ಮಿಕರು ಎಂದು ಪರಿಗಣಿಸಿ ಕನಿಷ್ಟ್ ವೇತನ, ರಜೆ, ಇಪಿಎಫ್, ಇಎಸ್‍ಐ ಸಹಿತ ಕಾರ್ಮಿಕರಿಗೆ ಶಾಸನಬದ್ಧವಾಗಿ ಲಭಿಸುತ್ತಿರುವ ಎಲ್ಲ ಸೌಕರ್ಯಗಳನ್ನು ನೀಡುವಂತೆ, ಐಸಿಡಿಎಸ್‍ನ ಮೂಲ ಯೋಜನೆಯನ್ನು ಎನ್‍ಇಪಿ-2020 ನೀತಿಯಂತೆ ಬದಲಾಯಿಸುವ ರಾಜ್ಯ ಸರ್ಕಾರದ ಯಾವುದೇ ಕ್ರಮವನ್ನು ಕೈಬಿಡುವಂತೆ, ಅಂಗನವಾಡಿ ಯೋಜನೆಯನ್ನು ಬಲಪಡಿಸುವಂತೆ ಅವರು ಒತ್ತಾಯಿಸಿದ್ದಾರೆ.
ಸೇವಾ ಹಿರಿತನವನ್ನು ಆಧರಿಸಿ 50% ಮತ್ತು ಮೆರಿಟ್ ಆಧರಿಸಿ 50% ಕಾರ್ಯಕರ್ತೆ ಮತ್ತು ಸಹಾಯಕಿಯರು ಮೇಲಿನ ಹುದ್ದೆಗೆ ಮುಂಬಡ್ತಿ ಹೊಂದಲು ಅವಕಾಶ ಮಾಡಿ ನಿಯಮಗಳನ್ನು ರಚಿಸುವಂತೆ, ಕೊಡುಗೆ ಆಧರಿತ ಪಿಂಚಣಿ ಯೋಜನೆ ಕೈಬಿಟ್ಟು, ಸರ್ಕಾರದ ಪಿಂಚಣಿ ಯೋಜನೆಗೆ ಒಳಪಡಿಸಬೇಕು. ಈಗಾಗಲೇ ನಿವೃತ್ತಿಯಾದ ನೌಕರರಿಗೆ ನಿವೃತ್ತಿ ಪರಿಹಾರಗಳು ಸಿಗುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸಿ ಸರಳವಾಗಿ ನಿವೃತ್ತಿ ಪರಿಹಾರ ಸಿಗುವಂತೆ ಸೂಕ್ತ ಕ್ರಮವಹಿಸುವಂತೆ, ಐಸಿಡಿಎಸ್ ಕೆಲಸಗಳನ್ನು ಹೊರತು ಪಡಿಸಿ, ಇತರ ಇಲಾಖೆಗಳ ಹೆಚ್ಚುವರಿ ಕೆಲಸಗಳಿಂದ ಬಿಡುಗಡೆ ಮಾಡುವಂತೆ, ಬೆಲೆ ಏರಿಕೆಯ ಇಂದಿನ ದರದಲ್ಲಿ ಅಂಗನವಾಡಿ ಕೇಂದ್ರಗಳ ಬಾಡಿಗೆ ದರ, ಮೊಟ್ಟೆ ದರ, ಸಾದಿಲ್ವಾರು, ಫ್ಲೆಕ್ಸಿಫಂಡ್ ಅನುದಾನ ಇತ್ಯಾದಿ ದರಗಳನ್ನು ಹೆಚ್ಚಿಸುವಂತೆ ಅವರು ಆಗ್ರಹಿಸಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಸಮರ್ಪಕವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ, ಅಗತ್ಯ ವಸ್ತುಗಳು ಮತ್ತು ಪೆಟ್ರೋಲ್, ಅಡುಗೆ ಅನಿಲ, ಡೀಸೆಲ್, ವಿದ್ಯುತ್ಬೆಲೆಗಳನ್ನು ಕೆಳಗಿಳಿಸುವಂತೆ, ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯುವಂತೆ ಅವರು ಒತ್ತಾಯಿಸಿದ್ದಾರೆ.