ವಿಜಯಪುರದಲ್ಲಿ ನಾಗಚಂದ್ರ ಕಟ್ಟಿಸಿದ ಮಲ್ಲಿನಾಥ ಬಸದಿ ಎಲ್ಲಿದೆ ?

ವಿಜಯೇಂದ್ರ ಕುಲಕರ್ಣಿ.
ಕಲಬುರಗಿ ಜೂ 20: ಪಂಪ ರಾಮಾಯಣ ರಚಿಸಿದ ಅಭಿನವ ಪಂಪ, ಹಂಪಕವಿ ಎಂದು ಕರೆಸಿಕೊಂಡ ಕನ್ನಡದ ಖ್ಯಾತ ಕವಿ ನಾಗಚಂದ್ರನು ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಕಟ್ಟಿಸಿದ ಮಲ್ಲಿನಾಥ ಜಿನಬಸದಿ ಈಗ ಚರ್ಚೆಯಲ್ಲಿದೆ.
ಪಂಪ ರಾಮಾಯಣ, ಮಲ್ಲಿನಾಥ ಪುರಾಣ ಮೊದಲಾದ ಕಾವ್ಯಗಳನ್ನು ರಚಿಸಿದ ಕನ್ನಡದ ಖ್ಯಾತ ಕವಿ ನಾಗಚಂದ್ರ ( ಕ್ರಿಶ ಸುಮಾರು 1050 ರಿಂದ 1100 ರ ಅವಧಿ)ನು ವಿಜಯಪುರಕ್ಕೆ ಅಲಂಕರಣಮಾದ ಮಲ್ಲಿನಾಥ ಜಿನ ಬಸದಿಯನ್ನು ನಿರ್ಮಿಸಿದ್ದಾಗಿ ತನ್ನ ಮಲ್ಲಿನಾಥ ಪುರಾಣ ಕಾವ್ಯದಲ್ಲಿ ಹೇಳಿದ್ದಾನೆ. ಹಾಗಾದರೆ ಈಗ ವಿಜಯಪುರದಲ್ಲಿ ಮಲ್ಲಿನಾಥ ಬಸದಿ ಎಲ್ಲಿದೆ?
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಆವರಣದ ಪ್ರವೇಶ ದ್ವಾರದ ಬಳಿ( ಕೇಂದ್ರ ಬಸ್ ನಿಲ್ದಾಣದಿಂದ ಬಡಿಕಮಾನ್ ಕಡೆಗೆ ಹೋಗುವ ರಸ್ತೆ) ಇರುವ ಕರಿಮುದ್ದೀನ್ ಮಸೀದಿ ಎಂದು ಕರೆಯಲಾಗುವ ಪುರಾತನ ಸ್ಮಾರಕವೇ ಮಲ್ಲಿನಾಥ ಬಸದಿ ಎನ್ನುತ್ತಾರೆ ಸಂಶೋಧಕರು. ಆದರೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ದೇವಾಲಯದಂತಿರುವ ಈ ಕಟ್ಟಡವನ್ನು ಮಸೀದಿ ಎಂದು ಗುರುತಿಸಿದೆ.ಇದು ಕಲ್ಯಾಣ ಚಾಲುಕ್ಯ ಶೈಲಿಯ 80 ಕ್ಕೂ ಹೆಚ್ಚು ಕಂಬಗಳನ್ನು ಹೊಂದಿರುವ ಬೃಹತ್ ಕಟ್ಟಡವಾಗಿದ್ದು ಎರಡು ಅಂತಸ್ತು ಹೊಂದಿದ್ದು ವಿಶೇಷವಾಗಿದೆ.
ಡಾ. ಎಂ.ಎಂ ಕಲಬುರ್ಗಿ, ಸೀತಾರಾಮ ಜಾಗೀರದಾರ, ಡಾ. ವಿಜಯ ದಬ್ಬೆ, ಡಾ.ಪ್ರೀತಿ ಶುಭಚಂದ್ರ,ಡಾ. ಆನಂದ ಕುಲಕರ್ಣಿ ಮೊದಲಾದ ವಿದ್ವಾಂಸರು ಈ ಕಟ್ಟಡವೇ ನಾಗಚಂದ್ರ ನಿರ್ಮಿತ ಮಲ್ಲಿನಾಥ ಬಸದಿ ಎಂದಿದ್ದಾರೆ.
ಅಲ್ಲಾವುದ್ದೀನ್ ಖಲ್ಜಿಯ ಆಪ್ತ ಗುಲಾಮನಾಗಿದ್ದ ಮಲ್ಲಿಕಾಫರನು 14 ನೆಯ ಶತಮಾನದ ದಕ್ಷಿಣ ದಂಡಯಾತ್ರೆಯ ಸಮಯದಲ್ಲಿ ಈ ಬಸದಿಯನ್ನು ತಾತ್ಕಾಲಿಕ ಮಸೀದಿಯಾಗಿ ಪರಿವರ್ತಿಸಿ, ಕರೀಮುದ್ದೀನ್‍ನಿಗೆ ವಿಜಯಪುರ ಪ್ರಾಂತದ ಜವಾಬ್ದಾರಿ ನೀಡಿ,ಪರಿವರ್ತಿತ ಮಸೀದಿಯ ನಿರ್ವಹಣೆ ಒಪ್ಪಿಸಿದ್ದನು.ಇದು ಮಲ್ಲಿನಾಥ ಬಸದಿ ಎಂಬುದಕ್ಕೆ ಸಾಕಷ್ಟು ಲಿಖಿತ ಪುರಾವೆಗಳಿದ್ದು ಯಾವುದನ್ನು ಸರಿಯಾಗಿ ಅಧ್ಯಯನ ಮಾಡದೇ ಪುರಾತತ್ವ ಇಲಾಖೆ ಈ ಬಸದಿಗೆ ಕರಿಮುದ್ದೀನ್ ಮಸೀದಿ ಎಂದು ನಾಮಫಲಕ ಹಾಕಿದೆ.ಆ ನಾಮಫಲಕ ತೆಗೆದು ಮಲ್ಲಿನಾಥ ಬಸದಿ ಎಂದು ನಾಮಫಲಕ ಹಾಕಬೇಕು. ಜೈನ ಹಾಗೂ ಹಿಂದೂ ಬಂಧುಗಳಿಗೆ ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು . ಸಮಸ್ಯೆ ಬಗೆ ಹರಿಯದಿದ್ದರೆ ಕಾನೂನು ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ಇತಿಹಾಸ ತಜ್ಞ ಆನಂದ ಕುಲಕರ್ಣಿ ಮತ್ತು ನಾಗಚಂದ್ರ ಪ್ರತಿಷ್ಠಾನದ ಪದಾಧಿಕಾರಿಗಳು ಆಗ್ರಹಿಸುತ್ತಾರೆ.
ಕವಿ ನಾಗಚಂದ್ರ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಕುಳಗೇರಿ ಗ್ರಾಮದವನು ಎಂದು ಇಲ್ಲಿನ ಶಾಸನಗಳ ಮೇಲೆ ಬೆಳಕು ಚಲ್ಲಿದವರು ಸೀತಾರಾಮ ಜಾಗೀರದಾರ ಅವರು.ಕುಳಗೇರಿಯ ಕ್ರಿಶ 1106 ಶಾಸನದಲ್ಲಿ ಹಂಪ ಕವಿ( ನಾಗಚಂದ್ರ)ಯ ಮಗ ದೇವಣ್ಣನ ಬಗ್ಗೆ ಇರುವ ಉಲ್ಲೇಖಗಳನ್ನು ಪರಾಮರ್ಶಿಸಿ ವಿಜಯಪುರದಿಂದ ಸುಮಾರು 30-32 ಮೈಲಿ ಅಂತರದಲ್ಲಿರುವ ಕುಳಗೇರಿಯೇ ನಾಗಚಂದ್ರನ ಊರು ಎಂದು ಸಂಶೋಧಿಸಿದ್ದಾರೆ.