ವಿಜಯನಗರ ಸಾಮ್ರಾಜ್ಯದ ಆಡಳಿತ ವಿಶ್ವಕ್ಕೆ ಮಾದರಿ

ಕಲಬುರಗಿ:ಎ.18: ಕನ್ನಡ ನಾಡಿನ ಹೆಮ್ಮೆಯ ವಿಜಯನಗರ ಸಾಮ್ರಾಜ್ಯವು ಸರ್ವ ನಾಗರಿಕರನ್ನು ಸಮಾನವಾಗಿ ಕಂಡು, ಸರ್ವರ ಕಲ್ಯಾಣ ಬಯಸಿದ ಸಾಮ್ರಾಜ್ಯವಾಗಿದೆ. ರಸ್ತೆ-ಬೀದಿಗಳಲ್ಲಿ ಮುತ್ತು-ರತ್ನ, ವಜ್ರ, ವೈಡೂರ್ಯ, ಬಂಗಾರ ಮಾರಾಟವಾಗುತ್ತಿದ್ದ ರಾಜ್ಯ ಅದಾಗಿತ್ತು. ಈ ಸಾಮ್ರಾಜ್ಯದ ಆಡಳಿವು ಕೇವಲ ಸೈನಿಕ ದಿಗ್ವಿಜಗಳಿಗೆ ಮಾತ್ರ ಸೀಮಿತವಾಗಿರದೆ, ಉತ್ತಮ ಆಡಳಿತ, ಕಲೆ, ಸಾಹಿತ್ಯ, ಪರಂಪರೆ, ವಾಸ್ತುಶಿಲ್ಪಕ್ಕೆ ಆದ್ಯತೆಯನ್ನು ನೀಡುವ ಮೂಲಕ ಸುವರ್ಣಯುಗವಾಗಿತ್ತು. ಒಂದು ಸಾಮಾಜ್ರ್ಯ ಹೇಗೆ ವಿಶ್ವಕ್ಕೆ ಮಾದರಿಯಾಗಿರಬೇಕೆಂದು ವಿಜಯನಗರ ಸಾಮ್ರಾಜ್ಯದ ಆಡಳಿತಗಾರರು ತಮ್ಮ ಜನಪರ ಆಡಳಿತದ ಮೂಲಕ ತೋರಿಸಿಕೊಟ್ಟಿದ್ದಾರೆಂದು ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಪ್ರಾಯಪಟ್ಟರು.

     ನಗರದ ಆಳಂದ ರಸ್ತೆಯ ಎಂ.ಎಂ.ಎನ್ ಟ್ಯೂಟೋರಿಯಲ್ಸ್‍ನಲ್ಲಿ 'ಬಸವೇಶ್ವರ ಸಮಾಜ ಸೇವಾ ಬಳಗ'ದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ 'ವಿಜಯನಗರ ಸಾಮ್ರಾಜ್ಯದ 685ನೇ ಸಂಸ್ಥಾಪನಾ ದಿನಾಚರಣೆ'ಯ ಕಾರ್ಯಕ್ರಮದಲ್ಲಿ ಸಂಸ್ಥಪಕರಾದ ಹಕ್ಕ-ಬುಕ್ಕರ ಭಾವಚಿತ್ರಕ್ಕೆ ನಮನಗಳನ್ನು ಸಲ್ಲಿಸಿ ಅವರು ಮಾತನಾಡುತ್ತಿದ್ದರು.

     ಬಹುತೇಕ ಇತಿಹಾಸ ತಜ್ಞರು ಅಭಿಮತಪಟ್ಟಂತೆ ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹಕ್ಕ-ಬುಕ್ಕರು 1336ರ ಏ.18 ರಂದು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದರೆಂದು ಉಲ್ಲೇಖಿಸಿದ್ದಾರೆ. ಕೃಷ್ಣದೇವರಾಯನ ಆಡಳಿತದ ಕಾಲದಲ್ಲಿ ನಾಗರಿಕರಿಗೆ ಬೇಕಾದ ಸೌಲಭ್ಯ ಹಾಗೂ ಹಕ್ಕುಗಳನ್ನು ನೀಡುವ ಮೂಲಕ ಪ್ರಜಾಪ್ರಭುತ್ವ ಅಂಶಗಳನ್ನು ಕಾಣಬಹುದಾಗಿದೆ. ಹಲವಾರು ನೀರಾವರಿ ಯೋಜನೆಗಳನ್ನು ಮಾಡಿ ಕೃಷಿ ಅಭಿವೃದ್ಧಿ ಮತ್ತು ವಾಣಿಜ್ಯ ಅಭಿವೃದ್ಧಿಗೆ ಶ್ರಮಿಸಿದರು. ಅನೇಕ ಧಾರ್ಮಿಕ ಸಂಸ್ಥೆಗಳಿಗೆ ಉದಾರವಾಗಿ ದಾನ-ದತ್ತಿಗಳನ್ನು ನೀಡುವ ಮೂಲಕ ಆಧ್ಯಾತ್ಮಿಕ ಕ್ಷೇತ್ರವನ್ನು ಕೂಡಾ ಬೆಳೆಸಿದರೆಂದರು.

  ಚಿಂತಕ ನರಸಪ್ಪ ಬಿರಾದಾರ ದೇಗಾಂವ ಮಾತನಾಡಿ, ವಿಜಯನಗರ ಸಾಮ್ರಾಜ್ಯದಿಂದ ನಮ್ಮ ನಾಡಿನ ಕೀರ್ತಿ ವಿಶ್ವದೆಲ್ಲೆಡೆ ಪಸರಿಸದೆ. ಅದಕ್ಕೆ ವಿಸ್ವದ ಅನೇಕ ತಜ್ಞರು, ಪಂಡಿತರು ಈ ಸಾಮ್ರಾಜ್ಯಕ್ಕೆ ಭೇಟಿ ಮಾಡಿ, ಅಲ್ಲಿನ ಸ್ಥಿತಿಯನ್ನು ತಮ್ಮ ಕೃತಿಗಳಲ್ಲಿ ಸೆರೆಹಿಡಿದಿದಾರೆ. ಕೃಷ್ಣದೇವರಾಯನ ಅಷ್ಟದಿಗ್ಗಜರ ಮಂತ್ರಿಮಂಡಲದ ಮೂಲಕ ಆಡಳಿದ ನಿರ್ಧಾರ ಕೈಗೊಳ್ಳುವುದು ಗಮನಿಸಿದರೆ, ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆ ಆಗಲೇ ಜಾರಿಯಲ್ಲಿತ್ತೆಂದು ಭಾಸವಾಗುತ್ತದೆಯೆಂದು ಹೇಳಿದರು.

   ಕಾರ್ಯಕ್ರಮದಲ್ಲಿ ಪ್ರಮುಖರಾದ ಬಸಯ್ಯಸ್ವಾಮಿ ಹೊದಲೂರ, ಬಸವರಾಜ ಎಸ್.ಪುರಾಣೆ, ದೇವೇಂದ್ರಪ್ಪ ಗಣಮುಖಿ, ಎಸ್.ಎಸ್.ಪಾಟೀಲ ಬಡದಾಳ, ಅಮರ ಜಿ.ಬಂಗರಗಿ, ಗಣೇಶ ಗೌಳಿ, ಓಂಕಾರ ಗೌಳಿ ಸೇರಿದಂತೆ ಮತ್ತಿತರರಿದ್ದರು.