ವಿಜಯನಗರ ಸಂಸ್ಥಾಪನಾ ದಿನಾಚರಣೆಗೆ ಅನುಮತಿ ನಿರಾಕರಿಸಿ

ಹೊಸಪೇಟೆ ಏ1: ಹಾಲುಮತ ಹಾಗೂ ಕುರುಬ ಸಮಾಜ ಇದೆ ಏಪ್ರೀಲ್18 ರಂದು ಹಂಪಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಜಯನಗರ ಸಂಸ್ಥಾಪನಾ ದಿನಾಚರಣೆಗೆ ಅನುಮತಿ ನೀಡಬಾರದು ಹೊಸಪೇಟೆ ವಾಲ್ಮೀಕಿ ಸಮಾಜ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ವಾಲ್ಮೀಕಿ ಗುರುಪೀಠದ ಬಳ್ಳಾರಿ ಜಿಲ್ಲಾ ಧರ್ಮದರ್ಶಿ ಬಿ.ಎಸ್. ಜಂಬಯ್ಯ ನಾಯಕ ದಿನಾಚರಣೆಗೆ ಅವಕಾಶ ನೀಡಬಾರದು ಅಲ್ಲದೆ ಏಪ್ರಿಲ್ 5 ರಂದು ಸಚಿವ ಆನಂದ್ ಸಿಂಗ್ ಹಾಗೂ ವಿಜಯನಗರ ವಿಶೇಷಾಧಿಕಾರಿ ಅನಿರುದ್ಧ ಶ್ರವಣ್ ಅವರಿಗೆ ಮನವಿಪತ್ರ ಸಲ್ಲಿಸಲಾಗುವುದು ಎಂದು ಹೇಳಿದರು. ವಿಜಯನಗರ ಸಂಸ್ಥಾಪಕರಾದ ಹಕ್ಕ-ಬುಕ್ಕರು ವಾಲ್ಮೀಕಿ ಸಮಾಜಕ್ಕೆ ಸೇರಿದವರಾಗಿದ್ದು, ಇದಕ್ಕೆ ಪೂರಕ ದಾಖಲೆಗಳಿವೆ. ಕನಕಗುರುಪೀಠದವರು ಒಂದು ದಿನ ಗೊತ್ತುಪಡಿಸಿದರೆ, ವಾಲ್ಮೀಕಿ ಗುರುಪೀಠ ಪೂರಕ ದಾಖಲೆಯೊಂದಿಗೆ ಮುಖಾಮುಖಿ ಚರ್ಚೆಗೆ ಬರುವಂತೆ ಆಗ್ರಹಿಸಿದರು.
ಕನಕಗುರುಪೀಠದ ಶ್ರೀಸಿದ್ಧರಾಮಾನಂದಪುರಿ ಸ್ವಾಮೀಜಿ ಅವರು ಮಾ.28ರಂದು ಹೊಸಪೇಟೆಯಲ್ಲಿ ನಡೆದ ಕುರುಬ ಸಮಾಜದ ಪೂರ್ವಭಾವಿ ಸಭೆಯಲ್ಲಿ ಹಕ್ಕ-ಬುಕ್ಕರು ಕುರುಬ ಸಮಾಜಕ್ಕೆ ಸೇರಿದವರು ಎಂದು ಹೇಳಿದ್ದಾರೆ. 11 ವರ್ಷಗಳ ಹಿಂದೆಯೇ ಈ ಬಗ್ಗೆ ವಾಲ್ಮೀಕಿ ಸಮಾಜದಿಂದ ಪ್ರತಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿಗೆ ಆಗ ಮನವಿ ಸಲ್ಲಿಸಿ ಸ್ಪಷ್ಟಪಡಿಸಲಾಗಿತ್ತು. ಈ ಭಾಗದಲ್ಲಿ ವಾಲ್ಮೀಕಿ ಹಾಗೂ ಕುರುಬ ಸಮಾಜದ ನಡುವೆ ಸಂಘರ್ಷವನ್ನುಂಟು ಮಾಡುವುದು ಬೇಡ. ಕೂಡಲೇ ಕುರುಬ ಸಮಾಜ ಹಮ್ಮಿಕೊಂಡಿರುವ ಸಮಾವೇಶವನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಕುರುಬ ಸಮಾಜ ಎಸ್ಟಿ ಮೀಸಲಿಗಾಗಿ ಹೋರಾಟ ನಡೆಸುತ್ತಿದೆ. ವಾಲ್ಮೀಕಿ ಸಮಾಜ ಕೂಡ ವಾಲ್ಮೀಕಿ ಗುರುಪೀಠದ ಶ್ರೀಪ್ರಸನ್ನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಎಸ್ಟಿ ಮೀಸಲು ಹೆಚ್ಚಳಕ್ಕೆ ಆಗ್ರಹಿಸಿ 450 ಕಿ.ಮೀ. ಪಾದಯಾತ್ರೆ ನಡೆಸಿದೆ. ಆದರೆ, ಕುರುಬ ಸಮಾಜ ಬುಡಕಟ್ಟು ಸಂಸ್ಕøತಿ ಅಧ್ಯಯನ ಬೇಡ ಎಂದು ಹೇಳಿದೆ. ನೇರ ಕೇಂದ್ರಕ್ಕೆ ಶಿಫಾರಸು ಮಾಡಲು ಆಗ್ರಹಿಸುತ್ತಿದೆ. ಹಕ್ಕಬುಕ್ಕರು ತಮ್ಮವರು ಎಂದು ಹೇಳಿಕೊಂಡು ಹೋಗುತ್ತಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ಬಂಡೆ ರಂಗಪ್ಪ, ಗೋಸಲ ಭರಮಪ್ಪ, ಕಿಚಿಡಿ ಶ್ರೀನಿವಾಸ್, ನಾಣಿಕೇರಿ ತಿಮ್ಮಯ್ಯ, ನಾಣಿಕೇರಿ ಕನಕಪ್ಪ, ಬಿ. ಜಂಬಣ್ಣ, ಕಟಿಗಿ ಬಸವರಾಜ, ಟಿ. ವೆಂಕಟೇಶ್, ಗುಡಗಂಟಿ ಮಲ್ಲಿಕಾರ್ಜುನ, ಬುಜ್ಜಿ (ಹನುಮಂತ), ಜಿ. ಮಂಜುನಾಥ, ಕಟಗಿ ರಾಮಕೃಷ್ಣ, ಜಂಬಾನಹಳ್ಳಿ ಸತ್ಯನಾರಾಯಣ, ಪಿ. ವೆಂಕಟೇಶ್, ಗುಜ್ಜಲ ಗಣೇಶ್, ಕಟಿಗಿ ವಿಜಯಕುಮಾರ, ಕಿಚಿಡಿ ಸುನೀಲ್, ಸುದರ್ಶನ ನಾಯಕ, ನಾಗಯ್ಯ, ವೀರಭದ್ರ, ಈರಣ್ಣ ಪೂಜಾರಿ, ಗುಜ್ಜಲ ಕೃಷ್ಣ ಇತರರು ಹಾಜರಿದ್ದರು.