ವಿಜಯನಗರ ವಿಧಾನಸಭಾ ಕ್ಷೇತ್ರ: ಗ್ರಾಪಂಗಳಿಗೆ ಮೂಲಸೌಕರ್ಯ ಸಮಾಲೋಚನಾ ಸಭೆ


ಹೊಸಪೇಟೆ(ವಿಜಯನಗರ),ಜು.16: ವಿಜಯನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ 10 ಗ್ರಾಮ ಪಂಚಾಯತಿಗಳ ಮೂಲಭೂತ ಸೌಕರ್ಯ ಪೂರೈಕೆಯಲ್ಲಿ ಕುಂದುಕೊರತೆಗಳ ಕುರಿತ ಸಮಾಲೋಚನಾ ಸಭೆಯು ಪ್ರವಾಸೋದ್ಯಮ,ಪರಿಸರ ಹಾಗೂ ಜೀವಿಶಾಸ್ತ್ರ ಸಚಿವರಾದ ಆನಂದ್‍ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಗರದ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಿತು.
ಈ ಸಭೆಯಲ್ಲಿ ಸಚಿವ ಆನಂದಸಿಂಗ್ ಅವರು 10 ಗ್ರಾಪಂಗಳ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳೊಂದಿಗೆ ಗ್ರಾಮಗಳ ಅಭಿವೃದ್ಧಿ ಕುರಿತಂತೆ ಅಹವಾಲುಗಳನ್ನು ಮತ್ತು ಸಲಹೆಗಳನ್ನು ಆಲಿಸಿದರು.
ಗ್ರಾಪಂಗಳ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರು ಗ್ರಾಮಗಳಿಗೆ ಗುಣಮಟ್ಟದ ರಸ್ತೆ, ಸ್ವಾಗತ ಕಮಾನು, ವಸತಿ ನಿವೇಶನ,ಅಂಗನವಾಡಿ ಕಟ್ಟಡ,ಗ್ರಂಥಾಲಯ ಕಟ್ಟಡ,ಕುಡಿಯುವ ನೀರಿನ ವ್ಯವಸ್ಥೆ, ಸ್ವಚ್ಛತೆ,ಜಲಜೀವನ್ ಮಿಶನ್ ಕಾಮಗಾರಿ, ನರೇಗಾ ಕ್ರಿಯಾಯೋಜನೆ, ಬಸ್‍ಗಳ ಸೌಕರ್ಯ ಸೇರಿದಂತೆ ಇನ್ನೀತರ ವಿಷಯಗಳ ಕುರಿತ ಕುಂದುಕೊರತೆಗಳನ್ನು ಸಚಿವ ಆನಂದಸಿಂಗ್ ಅವರು ಎದುರು ಪ್ರಸ್ತಾಪಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದವರ ಅಹವಾಲುಗಳನ್ನು ಅತ್ಯಂತ ಸಂಯಮದಿಂದ ಆಲಿಸಿದ ಸಚಿವ ಆನಂದಸಿಂಗ್ ಅವರು ಮೂರು ತಿಂಗಳೊಳಗೆ ಗ್ರಾಪಂ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರು ಪ್ರಸ್ತಾಪಿಸಿದ ವಿವಿಧ ವಿಷಯಗಳು ಮತ್ತು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕೂಡಲೇ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು 3 ತಿಂಗಳೊಳಗೆ ಅನುಷ್ಠಾನ ಮಾಡಿ ವರದಿ ಸಲ್ಲಿಸಬೇಕು;ಇಲ್ಲದಿದ್ದಲ್ಲಿ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಸದರಿ ಗ್ರಾಪಂಗಳಲ್ಲಿ ಸರಕಾರದ ಮಟ್ಟದಲ್ಲಿ ಬಾಕಿ ಇರುವ ಸಮಸ್ಯೆಗಳಿದ್ದಲ್ಲಿ ಅದನ್ನು ನಾನು ಬಗೆಹರಿಸುವೇ;ಉಳಿದವುಗಳನ್ನು ಜಿಲ್ಲಾಮಟ್ಟದ ಮತ್ತು ತಾಲೂಕುಮಟ್ಟದ ಅಧಿಕಾರಿಗಳು ಬಗೆಹರಿಸಬೇಕು ಎಂದು ಅವರು ಸೂಚನೆ ನೀಡಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಮಹಿಳೆಯರಿಗೆ ಉಚಿತ ವಿದ್ಯುತ್ ಚಾಲಿತ ಟೈಲರಿಂಗ್ ಮಷಿನ್‍ಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.ನಂತರ ಪ್ರವಾಸೋದ್ಯಮ ಇಲಾಖೆ ವತಿಯಿಂದ ತರಬೇತಿ ಪಡೆದ ಮಾರ್ಗದರ್ಶಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು.
ಈ ಸಂಧರ್ಭದಲ್ಲಿ ವಿಜಯನಗರದ ಜಿಲ್ಲಾಧಿಕಾರಿ ಅನಿರುದ್ದ ಶ್ರವಣ್, ವಿಜಯನಗರ ಜಿ.ಪಂ. ಸಿಇಒ ಹರ್ಷಲ್ ಬೋಯರ್ ನಾರಾಯಣರಾವ್,ತಾಪಂ ಇಒ ರಮೇಶ, ಜಿಪಂ ಉಪಕಾರ್ಯದರ್ಶಿ ತಿಮ್ಮಪ್ಪ, ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನಯ್ಯಸ್ವಾಮಿ ಸೇರಿದಂತೆ ಜಿಲ್ಲಾಮಟ್ಟದ ಹಾಗೂ ತಾಲೂಕುಮಟ್ಟದ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು ಮತ್ತು ಇತರರು ಇದ್ದರು.