ವಿಜಯನಗರ ಪ್ರೀಮಿಯರ್ ಲೀಗ್:ಬಹುಮಾನ ವಿತರಣೆ

ಕೋಲಾರ,ಜ.೧೨: ನಗರದ ವಿಜಯನಗರ ಬಡಾವಣೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ೩ ದಿನಗಳ (ವಿಜಯನಗರ ಪ್ರೀಮಿಯರ್ ಲೀಗ್) ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿಲ್ಲೆಯಿಂದ ೧೫ ತಂಡಗಳು ಭಾಗವಹಿಸಿದ್ದು, ಶ್ರೀನಿವಾಸಪುರದ ಎಂಎಸ್‌ಎ ಕ್ರಿಕೆಟರ್ಸ್ ತಂಡವು ಮೊದಲನೇ ಬಹುಮಾನ ವಿಕ್ಟರಿ ಕಪ್ ಜೊತೆಗೆ ೫೦ ಸಾವಿರ ನಗದು ಹಾಗೂ ಕೋಲಾರದ ವಿಜಯನಗರ ಕ್ರಿಕೆಟರ್ಸ್ ತಂಡವು ರನ್ನರ್ಸ್ ಕಪ್ ಜೊತೆಗೆ ೨೫ಸಾವಿರ ನಗದು ಪಡೆದುಕೊಂಡಿತು. ಟೆನ್ನಿಸ್ ಬಾಲ್ ಕ್ರಿಕೆಟ್ ಪೈನಲ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಗಳಿಗೆ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯೆ ಪುಷ್ಪ ಬಾಬುರವರು ಬಹುಮಾನ ವಿತರಿಸಿ ಮಾತನಾಡಿ, ಯಾವುದೇ ಕ್ರೀಡಾ ಸಾಧನೆ ಮಾಡಲು ನಮ್ಮ ದೇಹ ಸಮೃದ್ಧ ಹಾಗೂ ಸಮರ್ಥವಾಗಿರಬೇಕು. ಗ್ರಾಮೀಣ ಭಾಗದ ಕ್ರೀಡಾಪಟುಗಳಿಗೆ ಉತ್ತೇಜನ ನೀಡಲು ನಾನು ಸದಾ ಮುಂಚೂಣಿಯಲ್ಲಿದ್ದು ಅವರಿಗೆ ಬೇಕಾದ ಅನುಕೂಲವನ್ನು ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ವಿಜಯನಗರ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಗೆ ಒಂದು ಲಕ್ಷರೂ ಆರ್ಥಿಕ ಸಹಾಯಮಾಡಿದ ಕೋಮುಲ್ ನಿರ್ದೇಶಕ ಡಿ.ವಿ.ಹರೀಶ್ ರವರಿಗೆ ಧನ್ಯವಾದಗಳನ್ನು ತಿಳಿಸಿದರು.
ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ವಿಜಯನಗರ ಮಂಜುನಾಥ್ ಮಾತನಾಡಿ, ಈ ಪಂದ್ಯಾವಳಿಯಲ್ಲಿ ವಿಜೇತರಾದವರು ಭವಿಷ್ಯದಲ್ಲಿ ಪ್ರಖ್ಯಾತ ಕ್ರಿಕೆಟಿಗರಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ನಿರಂಜನ್, ಮುಖಂಡರಾದ ಬಾಬು ಹಾಗೂ ವಿಜಯನಗರ ಕ್ರಿಕೆಟರ್ಸ್ ತಂಡದ ಎಲ್ಲಾ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಹಾಜರಿದ್ದರು.