ವಿಜಯನಗರ ತಿರುಗಾಟ ಸಂಶೋಧನ ತಂಡದಿಂದ  ಬ್ರಿಟಿಷ್ ಕಾಲಾವಧಿಯ ದ್ವಿ ಭಾಷಾ ಬೃಹತ್ ಬಂಡೆಗಲ್ಲು ಶಾಸನ ಶೋಧ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.26: ನಗರದ ಸಿರುಗುಪ್ಪ ರಸ್ತೆಯ ಗಾಯತ್ರಿ ನಗರದ ಈಶ್ವರ ದೇವಸ್ಥಾನದ ಪಕ್ಕದ ಗುಡ್ಡದ ಬಳಿ ಬೃಹತ್ ಬಂಡೆಗಲ್ಲು ಶಾಸನವನ್ನು ಶೋಧಿಸಲಾಗಿದೆ.
ಈ ಶಾಸನವನ್ನು ಇತಿಹಾಸ ಸಂಶೋಧಕರಾದ ಟಿ ಎಚ್ ಎಂ ಬಸವರಾಜ ಮತ್ತು ವೈ ಹನುಮಂತ ರೆಡ್ಡಿ ಅವರುಗಳ ಸೂಕ್ತ ಮಾರ್ಗದರ್ಶನ ಸಹಕಾರದಿಂದ ವಿಜಯನಗರ ತಿರುಗಾಟ ಸಂಶೋಧನ ತಂಡವು ಈ ಅಪರೂಪದ ಶಿಲಾ ಶಾಸನವನ್ನು ಪತ್ತೆಮಾಡಲಾಗಿದೆ.
ಈ ಬೃಹತ್ ಬಂಡೆಗಲ್ಲು ಶಾಸನವು  ಉತ್ತರಾಭಿಮುಖವಾಗಿದ್ದು, ಇಂಗ್ಲಿಷ್ ಮತ್ತು ತೆಲುಗು ಲಿಪಿಯಲ್ಲಿ ಬರೆಯಲಾಗಿದೆ.೨೫ ಅಡಿ ಎತ್ತರ ೨೦ ಅಡಿ ಅಗಲವಾಗಿದೆ. ಬಂಡೆಯ ಮೇಲುತುದಿಗೆ ಇಂಗ್ಲಿಷ್ ಲಿಪಿಯ ೮ ಸಾಲುಗಳಿದ್ದರೆ ಅದರ ಕೆಳಗೆ ೬ ಸಾಲಿನ ತೆಲುಗು ಲಿಪಿಯು ಇದೆ. ಬ್ರಿಟಿಷ್ ವಸಾಹತು ಕಾಲದ ದ್ವಿಭಾಷ ಶಾಸನದಲ್ಲಿ ಬಂಡೆ ಇರುವ ಸ್ಥಳದಿಂದ ಸಿರುಗುಪ್ಪ ರಸ್ತೆಯ ಮೂಲಕ ಕಾಲುವೆಯನ್ನು ಜನರ ಅನುಕೂಲಕ್ಕಾಗಿ ಮ್ಯಾತು ಅವರ ಮಗ ಡೇನಿಯಲ್ ಅಬ್ರಹಾಂ ಕಾಲುವೆ ಮೂಲಕ ನೀರು ಹರಿಸಿ ಆ ನೀರನ್ನು ಜನರ ಬಳಕೆಗಾಗಿ ಕಾಮಗಾರಿ ಮಾಡಿಸಿದ ಕುರಿತ ವಿವರ ಹಾಗೂ ಕ್ರಿ. ಶ ೧೮೪೨ ರಲ್ಲಿ ಡೇನಿಯಲ್ ಅಬ್ರಹಾಂ ಮರಣ ಹೊಂದಿದನೆಂಬ ಮಾಹಿತಿಯು ಇದೆ. ಈ ಕಾಲುವೆಯ ಕಾಮಗಾರಿಯು ಕ್ರಿ ಶ ೧೮೭೧ ರಲ್ಲಿದ್ಧ ಬಳ್ಳಾರಿ ಜಿಲ್ಲಾ ಕಲೆಕ್ಟೆರ್ ಜೆ ಎಚ್ ಮಾಸ್ಟರ್ ಅವರ ಅವಧಿಯಲ್ಲಿ ಪೂರ್ಣಗೊಂಡಿರಬೇಕೆಂದು ಸೂಚಿಸುತ್ತದೆ.
ಈ ಶಾಸನವನ್ನು ವಿಜಯನಗರ ತಿರುಗಾಟ ಸಂಶೋಧನ ತಂಡದ ಸದಸ್ಯರಾದ ಬಳ್ಳಾರಿ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ತಿಪ್ಪೇಸ್ವಾಮಿ ಎಚ್,ಸಂಶೋಧಕಾರದ ಡಾ. ವೀರಾಂಜನೇಯ,ರವಿಕುಮಾರ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದ ಡಾ. ಗೋವಿಂದ, ದೃಶ್ಯಕಲಾ ವಿಭಾಗದ ಡಾ. ಕೃಷ್ಣಗೌಡ, ಆಭಿವೃದ್ದಿ ಅಧ್ಯಯನ ವಿಭಾಗದ ಡಾ. ಗೋವರ್ಧನ್ ಅವರು ಪತ್ತೆಹಚ್ಚಿದ್ದಾರೆ.
ಬ್ರಿಟಿಷ್ ಕಾಲಾವಧಿಯ ಆಡಳಿತವನ್ನು ತಿಳಿಸುವ ಅಪರೂಪದ ಈ ಬೃಹತ್ ಬಂಡೆಗಲ್ಲು ಶಾಸನದ ಸುತ್ತಲೂ  ಜಿಲ್ಲಾಡಳಿತವು ರಕ್ಷಣೆಮಾಡಿ,ದಾಖಲೆಯನ್ನು ಉಳಿಸಬೇಕಾದ ಅವಶ್ಯವಿದೆ.ಏಕೆಂದರೆ ಪಡಿಯಚ್ಚು ತೆಗೆಯುವಾಗ ಅಲ್ಲಿನ ಸ್ಥಳೀಯ ನಿವಾಸಿಯೊಬ್ಬ ಇದೇ ತರಹದ ಲಿಪಿಯ ಬಂಡೆಗಲ್ಲು ಶಾಸನವಿತ್ತಂತೆ.ಅದನ್ನು ಒಡೆದು ಹಾಕಿದ್ದಾರೆ ಎಂದಿದ್ದಾರೆ. ಇದರಿಂದ ಜಿಲ್ಲಾಧಿಕಾರಿ ಅವರು ಕಾಳಜಿ ವಹಿಸಿ ಈ ದಾಖಲೆಯ ಶಾಸನವನ್ನು ರಕ್ಷಿಸಬೇಕೆಂದು ಇತಿಹಾಸಕಾರರು ಹಾಗೂ ತಂಡದ ಸದಸ್ಯರು ಕೊರಿದ್ದಾರೆ.