ವಿಜಯನಗರ ಜಿಲ್ಲೆ ಸಮಗ್ರ ಅಭಿವೃದ್ಧಿಗೆ ಆನಂದ್ ಸಿಂಗ್ ಕಟಿಬದ್ಧ.


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ: ಬಳ್ಳಾರಿ ಜಿಲ್ಲೆಯಿಂದ ಬೇರ್ಪಟ್ಟ ವಿಜಯನಗರ ಜಿಲ್ಲೆ ಅಭಿವೃದ್ಧಿಗೆ  ಸಚಿವ ಆನಂದ್ ಸಿಂಗ್ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಈ ಭಾಗದ ಜನರ ಸುದೈವ ಎಂದು ಸಾರಿಗೆ, ಪರಿಶಿಷ್ಟ ಪಂಗಡ ಅಭಿವೃದ್ಧಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ಹೊಸಪೇಟೆಯ ಹಂಪಿ ರಸ್ತೆಯ ರೈಲ್ವೆ ನಿವಾಸಗಳ ಬಳಿ ನಡೆದ ಬೃಹತ್ ಕಾರ್ಯಕ್ರಮದಲ್ಲಿ ನೂರಾರು ಕೋಟಿ ಅನುದಾನ ಕಾಮಗಾರಿ, ಶಂಕುಸ್ಥಾಪನೆ, ಉದ್ಘಾಟನೆ,  ಸೇರಿದಂತೆ ಫಲಾನುಭವಿಗಳಿಗೆ ಪಟ್ಟಾ ವಿತರಣೆ ಸಮಾರಂಭ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಆನಂದ್ ಸಿಂಗ್ ಹೊರತಾಗಿ ಯಾರೇ ಇದ್ದರೂ ಜಿಲ್ಲಾ ರಚನೆ ಅಭಿವೃದ್ಧಿ ಸುಲಭವಾಗಿರಲಿಲ್ಲಾ, ಇವರ ಇಚ್ಛಾಶಕ್ತಿ ಕಾರಣವಾಗಿದೆ, ಯಾವುದೆ ಕೆಲಸಹಿಡಿದರೂ ಮುಗಿಯುವ ವರೆಗೂ ಕೈಬಿಡೋಲ್ಲಾ ಇದಕ್ಕೆ ಒಂದು ವರ್ಷದಲ್ಲಿ ಆದ ಪ್ರಗತಿ ಸಾಕ್ಷಿಯಾಗಿದೆ ಎಂದರು.
2023 ರ ವಿಧಾನ ಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕ್ಷೇತ್ರಕ್ಕೆ ಭರಪೂರ ಅನುದಾನ ತಂದ ಸಚಿವ ಆನಂದ್ ಸಿಂಗ್ ರವರನ್ನು ಹಾಡಿ ಹೊಗಳಿದರು. ಹೊಸಪೇಟೆ ಕ್ಷೇತ್ರ ವ್ಯಾಪ್ತಿಯಲ್ಲಿ 284 ಕೋಟಿ ವೆಚ್ಚದ ಕಾಮಗಾರಿ ಶಂಕುಸ್ಥಾಪನೆ, 13.20ಕೋಟಿ ವೆಚ್ಚದ ಕಾಮಗಾರಿ ಉದ್ಘಾಟನೆ ಹಾಗೂ 641ಕೋಟಿ ಮೊತ್ತದ 91 ಕಾಮಗಾರಿಗಳಿಗೆ ಚಾಲನೆ ನೀಡಿದರು.
 ವೀರಾವೇಶದ ಭಾಷಣ ಮಾಡಿದ ಶ್ರೀ ರಾಮುಲು
ಮೀಸಲಾತಿ ಹೆಚ್ಚಳ, ಅನುದಾನ ನೀಡಿಕೆ, ಅಭಿವೃದ್ಧಿಯಲ್ಲಿ ತಮ್ಮ ಪಾಲ್ಗೊಳ್ಳುವ ಕ್ರಮವನ್ನು ಭಾವೋದ್ವೀಗದಿಂದ ಶ್ರೀರಾಮುಲು ಮಾತನಾಡಿದರು. ಜಿಲ್ಲೆಯ ಕೂಡ್ಲಿಗಿ, ಸಂಡೂರು ತಾಲೂಕಿನ 74ಕೆರೆಗಳ ಅಭಿವೃದ್ಧಿ ಮಾಡಿರುವುದನ್ನು ಸ್ಮರಿಸಿದರು.
ಹೃದಯ ಶ್ರೀಮಂತ ಆನಂದ್ ಸಿಂಗ್ ಈ ಭಾರಿಯೂ ಶಾಸಕ ಸಚಿವರಾಗಿ ಮುಂದುವರೆಯಲು ಆರ್ಶಿವದಿಸುವಂತೆ ಮನವಿ ಮಾಡಿದರು.
ವೇದಿಕೆಯಲ್ಲಿ ಸಂಸದ ದೇವೆಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಸಿಇಓ ಸದಾಶಿವ ಪ್ರಭು, ನಗರಸಭೆಯ ಅಧ್ಯಕ್ಷ ಸುಂಕಮ್ಮ, ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಉಪಾಧ್ಯಕ್ಷ ಎಲ್.ಎಸ್. ಆನಂದ್  ಸೇರಿದಂತೆ ನಗರಸಭಾ ಸದಸ್ಯರು ಸಂಘ ಸಂಸ್ಥೆಗಳು ಪದಾಧಿಕಾರಿಗಳು ಪಾಲ್ಗೊಂಡಿದ್ದರು.