ವಿಜಯನಗರ ಜಿಲ್ಲೆ ರಚನೆಗೆ ಸಂಪುಟ ಒಪ್ಪಿಗೆ


ಬೆಂಗಳೂರು, ನ. ೧೮- ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಪ್ರತ್ಯೇಕ ಜಿಲ್ಲೆಗೆ ಸಚಿವ ಸಂಪುಟ ಸಭೆ ಸಾತ್ವಿಕ ಒಪ್ಪಿಗೆ ನೀಡಿದೆ. ಈ ಮೂಲಕ ರಾಜ್ಯದಲ್ಲಿ ವಿಜಯನಗರ ೩೧ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬರಲಿದೆ.
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಸಂಪುಟದ ತೀರ್ಮಾನಗಳ ಬಗ್ಗೆ ವಿವರ ನೀಡಿದ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಅವರು, ವಿಜಯನಗರ ಜಿಲ್ಲೆ ರಚನೆಗೆ ಇಂದಿನ ಸಂಪುಟ ಸಭೆ ತಾತ್ವಿಕ ಒಪ್ಪಿಗೆ ನೀಡಿದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅಧಿಕೃತ ಅನುಮೋದನೆ ನೀಡಲಾಗುವುದು ಎಂದರು.
ವಿಜಯನಗರ ಜಿಲ್ಲೆಗೆ ಯಾವ ಯಾವ ತಾಲ್ಲೂಕುಗಳ ಸೇರ್ಪಡೆಯಾಗಲಿವೆ. ಇದರ ವ್ಯಾಪ್ತಿ, ವಿಸ್ತೀರ್ಣ ಎಲ್ಲದರ ಬಗ್ಗೆಯೂ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ವಿಜಯನಗರ ಜಿಲ್ಲೆ ರಚನೆಯಾಗಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಅದರಂತೆ ಸಂಪುಟ ಸಭೆಯಲ್ಲಿ ಇದಕ್ಕೆ ಇಂದು ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದರು.
ಆನಂದ್‌ಸಿಂಗ್ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಅರಣ್ಯ ಸಚಿವ ಆನಂದ್‌ಸಿಂಗ್ ಅವರು, ಐತಿಹಾಸಿಕ ಹಂಪಿ ಕ್ಷೇತ್ರವನ್ನು ಒಳಗೊಂಡಿರುವ ವಿಜಯನಗರ ಜಿಲ್ಲೆ ರಚನೆಗೆ ಸಂಪುಟ ಸಭೆ ತಾತ್ವಿಕ ಅನುಮೋದನೆ ನೀಡಿದೆ. ಬಳ್ಳಾರಿಯ ಪಶ್ಚಿಮ ತಾಲ್ಲೂಕುಗಳ ಜನರು ಹಾಗೂ ಹೋರಾಟಗಾರರ ಬಹುದಿನದ ಬೇಡಿಕೆ ಈಡೇರಿದೆ. ಈ ಬೇಡಿಕೆ ಈಡೇರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಇತಿಹಾಸದ ಪುಟ ಸೇರುವ ಕೆಲಸ ಮಾಡಿದ್ದಾರೆ. ಮರೆಯಲಾಗದಂತಹ ತೀರ್ಮಾನವನ್ನು ತೆಗೆದುಕೊಂಡಿದ್ದಾರೆ. ಈ ತೀರ್ಮಾನಕ್ಕೆ ಸಹಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರು ಹಾಗೂ ಸಚಿವ ಸಹೋದ್ಯೋಗಿಗಳು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ನಾಯಕರುಗಳಿಗೆ ಅಭಿನಂದನೆ ಸಲ್ಲಿಸಿದರು.
ವಿಜಯನಗರ ಜಿಲ್ಲೆಗೆ ಯಾವ ಯಾವ ತಾಲ್ಲೂಕುಗಳು ಸೇರ್ಪಡೆಯಾಗಬೇಕು ಎಂಬ ಬಗ್ಗೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಸಚಿವ ಶ್ರೀರಾಮುಲು ಸಹ ವಿಜಯನಗರ ಜಿಲ್ಲೆ ರಚನೆಯನ್ನು ಸ್ವಾಗತಿಸಿ, ಜನರ ಬಹುದಿನಗಳ ಬೇಡಿಕೆ ಈಡೇರಿದೆ ಎಂದರು.