ವಿಜಯನಗರ ಜಿಲ್ಲೆ ಘೋಷಣೆ ಪಕ್ಷಾತೀತವಾಗಿ ಸಚಿವ ಆನಂದ್ ಸಿಂಗ್ ಗೆ ಸನ್ಮಾನ

ಹೊಸಪೇಟೆ ನ 20 : ವಿಜಯನಗರ ಜಿಲ್ಲೆಯ ಘೋಷಣೆ ಹನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಶುಕ್ರವಾರದಂದು ಸಂಜೆ ನಗರದ ಸರ್ವ ಸಂಘಟನೆಗಳ ಮುಖಂಡರು ಪಕ್ಷಾತೀತವಾಗಿ ಸನ್ಮಾನಿಸಿದರು.

ಶಾಸಕರ ಕಾರ್ಯಾಲಯಕ್ಕೆ ಬಂದ ಮುಖಂಡರು ಸಚಿವರಿಗೆ ಶಾಲು ಹೊದಿಸಿ ಗೌರವಿಸಿದರು. ನಂತರ ಮಾತನಾಡಿದ ರೈಲ್ವೆ ಹೋರಾಟ ಸಮಿತಿಯ ವೈ.ಯಮುನೇಶ್, ಜಿಲ್ಲೆ ಘೋಷಣೆಯು ಚರಿತಾತ್ಮಕ ನಿರ್ಧಾರವಾಗಿದ್ದು, ಇಡೀ ರಾಜ್ಯದಲ್ಲೇ ಸಾಮ್ರಾಜ್ಯದ ಹೆಸರಿನಲ್ಲಿರುವ ಮೊದಲ ಜಿಲ್ಲೆ ಎಂಬ ಹೆಮ್ಮೆ ನಮ್ಮದಾಗುತ್ತದೆ. ವಿಜಯನಗರ ಜಿಲ್ಲೆಯಾಗುತ್ತಿರುವ ಹಿನ್ನಲೆಯಲ್ಲಿ ಪಶ್ಚಿಮ ತಾಲೂಕಿನ ಎಲ್ಲಾ ಜನರ ಪರವಾಗಿ ಅಭಿನಂದನೆಗಳನ್ನು ತಿಳಿಸುವ ಸಲುವಾಗಿ ತಾಲೂಕಿನ ಎಲ್ಲಾ ಸಂಘಸಂಸ್ಥೆಗಳು ಒಟ್ಟಾಗಿ ಸಚಿವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು.

ವಿಜಯನಗರ ಜಿಲ್ಲಾ ಹೋರಾಟಗಾರ‌ಮಲ್ಲಾರಿ ದೀಕ್ಷಿತ್ ಅವರು ಮಾತನಾಡಿ ಸಚಿವರು ತಮ್ಮ ಆಡಳಿತದಿಂದಲೇ ಎಲ್ಲರ ಪ್ರೀತಿ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ, ಪರರನ್ನು ಗೌರವಿಸುವ ಗುಣ ಸಚಿವರದ್ದಾಗಿದೆ. ಎಲ್ಲಕ್ಕಿಂತ ಮಿಗಿಲಾಗಿ ಸಚಿವರು ನನ್ನ ವಿದ್ಯಾರ್ಥಿ ಎಂಬ ಹೆಮ್ಮೆಯಿದೆ. 15 ವರ್ಷಗಳಿಂದ ಜಿಲ್ಲೆಗಾಗಿ ಹೋರಾಟ ಮಾಡಲಾಗುತ್ತಿತ್ತು. ಹಂಪಿಯಿಂದ ಬೆಂಗಳೂರುವರೆಗೂ ಪಾದಯಾತ್ರೆ ಮಾಡಲು ಸಹ ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರದಿಂದ ಪಾದಯಾತ್ರೆ ನಡೆಸಲಾಗುತ್ತಿರಲಿಲ್ಲ. ಅದಲ್ಲದೇ ಜಿಲ್ಲೆಯ ಹೋರಾಟಕ್ಕೆ ರಾಜಕೀಯ ಇಚ್ಚಾಶಕ್ತಿ ಕೊರತೆ ಇತ್ತು ಅದನ್ನು ಸಚಿವರು ನೀಗಿಸಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಚಿವ ಆನಂದ್ ಸಿಂಗ್ ಜಿಲ್ಲೆ ರಚನೆಯಿಂದ ಮುಂದಿನ ಯುವ ಪೀಳಿಗೆಗೆ ಭವಿಷ್ಯ ಸಿಗುತ್ತದೆ, ಜಿಲ್ಲೆ ರಚನೆಗಾಗಿ ಉಳ್ಳೇಶ್, ವಿರೂಪಾಕ್ಷಪ್ಪ, ಕುರಟ್ಟಿ ಯಂಕಪ್ಪ, ಅಶ್ವಥ್ ತಂಬ್ರಳ್ಳಿ, ಗವಿಯಪ್ಪ, ಎಂ.ಪಿ ಪ್ರಕಾಶ್ ಸೇರಿದಂತೆ ಹಲವಾರು ಮಹನೀಯರು ಹೋರಾಟ ನಡೆಸಿದ್ದಾರೆ ಅವರನ್ನು ನೆನೆಯುವ ಸಲುವಾಗಿ ಪಶ್ಚಿಮ ತಾಲೂಕುಗಳೊಂದಿಗೆ ಚರ್ಚಾಸಿ ಸಂಭ್ರಮಾಚರಣೆ ಮಾಡಲಾಗುತ್ತದೆ ಎಂದರು.
ಸನ್ಮಾನದ ವೇಳೆ ಕಾಂಗ್ರೆಸ್ ಪಕ್ಷದ ಗುಜ್ಜಲ್ ನಾಗರಾಜ, ನಿಂಬಗಲ್ ರಾಮಕೃಷ್ಣ ಹಾಗೂ ಕೆ.ಗಾಳೆಪ್ಪ ಸೇರಿದಂತೆ ವಿಜಯನಗರ ಜಿಲ್ಲಾ ರಚನೆ ಹೋರಾಟ ಸಮಿತಿ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಇದ್ದರು.