ವಿಜಯನಗರ ಜಿಲ್ಲೆ ಘೋಷಣೆಗೆ ವಿರೋಧಿಸಿ ಪ್ರತಿಭಟನೆ

ಹರಪನಹಳ್ಳಿ.ನ.೧೯; ರಾಜ್ಯ ಸರ್ಕಾರ ವಿಜಯನಗರ ಜಿಲ್ಲೆ ರಚನೆಗೆ ಇಂದಿನ ಸಂಪುಟ ಸಭೆಯಲ್ಲಿ ತಾತ್ವಿಕ ಒಪ್ಪಿಗೆ ನೀಡಿರುವುದನ್ನು ವಿರೋಧಿಸಿ ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿ ಪದಾದಿಕಾರಿಗಳು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿಯ ಸಂಚಾಲಕ ಇದ್ಲಿ ರಾಮಪ್ಪ ಮಾತನಾಡಿ, ತುಘಲಕ್ ರೀತಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಗಣ ಹಗರಣದಲ್ಲಿ ಸಿಲುಕಿರುವ ಆನಂದ್‌ಸಿಂಗ್ ಅವರನ್ನು ಓಲೈಕೆ ಮಾಡಲು ವಿಜಯನಗರ ಜಿಲ್ಲೆ ಘೋಷಣೆ ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಿರ್ಧಾರವಾಗಿದೆ. ಕೂಡಲೇ ವಿಜಯನಗರ ಜಿಲ್ಲಾ ಘೋಷಣೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಹರಪನಹಳ್ಳಿ ಜಿಲ್ಲೆ ರಚನೆಗೆ ಯಾವುದೇ ರೀತಿಯ ಪ್ರಯತ್ನ ಪಡೆದೆ ನೆಪ ಮಾತ್ರಕ್ಕೆ ವಿರೋಧಿಸುತ್ತಾ ಉತ್ತರಕುಮಾರನ ಪೌರುಷ ತೋರಿಸುತ್ತಿರುವ ಸ್ಥಳೀಯ ಶಾಸಕ ಜಿಕರುಣಾಕರೆಡ್ಡಿ ಅವರಿಗೆ ನೈತಿಕತೆ ಇದ್ದರೆ ಕೂಡಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹರಪನಹಳ್ಳಿ ಜಿಲ್ಲಾ ಹೋರಾಟಕ್ಕೆ ಧುಮುಕಲಿ ಎಂದು ಆಹ್ವಾನ ನೀಡಿದರು. ಜಿಲ್ಲಾ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷರಾದ ಹೊಸಳ್ಳಿ ಮಲ್ಲೇಶ್ ಮಾತನಾಡಿ, ಪಶ್ಚಿಮ ತಾಲೂಕುಗಳಾದ ಹರಪನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಸೇರಿಸಿಕೊಂಡು ಹರಪನಹಳ್ಳಿ ಜಿಲ್ಲಾ ಕೇಂದ್ರವಾಗಲು ಸೂಕ್ತವಾದ ಪ್ರದೇಶವಾಗಿದೆ ಎಂದು ಸರ್ಕಾರಿ ವರದಿಗಳು ಹೇಳುತ್ತಿವೆ. ಆದರೆ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕಿನ ಜನರಿಗೆ ಬಳ್ಳಾರಿ ಮತ್ತು ಹೊಸಪೇಟೆ ನಗರ ಸಮಾನ ದೂರದಲ್ಲಿರುತ್ತವೆ ಎಂಬ ವೈಜ್ಞಾನಿಕ ಸತ್ಯವನ್ನು ಮರೆಮಾಚಿ ಹೊಸಪೇಟೆ ತಾಲ್ಲೂಕನ್ನು ಜಿಲ್ಲಾ ಕೇಂದ್ರವನ್ನಾಗಿಸಿ ವಿಜಯನಗರ ಜಿಲ್ಲೆ ಘೋಷಣೆ ಮಾಡಿರುವುದು ತಾಲೂಕಿನ ಜನರಿಗೆ ಸಹಮತವಿಲ್ಲ ಕಿಡಿಕಾರಿದರು. ಪತ್ರಿಭಟನಾಕಾರರು ಕ್ಯಾಬಿನೆಟ್ ನಿರ್ಣಯದ ಪ್ರತಿಯನ್ನು ಸುಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹರಪನಹಳ್ಳಿಯಲ್ಲಿ ಗುರುವಾರ ನ.೧೯ರಂದು ಬೆಳಗ್ಗೆ ೧೦ ಗಂಟೆಗೆ ತುರ್ತು ಸಭೆಯನ್ನು ಕರೆಯಲಾಗಿದ್ದು, ಮುಂದಿನ ಹಂತದ ಹೋರಾಟದ ರೂಪರೇಷೆಗಳ ಬಗ್ಗೆ ನಿರ್ಮಿಸಲಾಗುವುದು ಎಂದು ಜಿಲ್ಲಾ ಹೋರಾಟ ಸಮಿತಿ ಪದಾದಿಕಾರಿಗಳು ತಿಳಿಸಿದರು. ಜಿಲ್ಲಾ ಹೋರಾಟ ಸಮಿತಿ ಮುಖಂಡರಾದ ಶಿಕಾರಿ ಬಾಲಪ್ಪ, ಕಲ್ಲಹಳ್ಳಿ ಗೋಣ್ಯೆಪ್ಪ, ಚಂದ್ರನಾಯ್ಕ, ಸಿದ್ದೇಶಪ್ಪ ಮುಂತಾದವರು ಭಾಗವಹಿಸಿದ್ದರು.