ವಿಜಯನಗರ ಜಿಲ್ಲೆ ಕಲ್ಯಾಣ ಕರ್ನಾಟಕ ಉತ್ಸವ -ನೂತನ ಜಿಲ್ಲೆಯೂ 371 ಜೆ ಗೆ ಅನ್ವಯ

ಸಂಜೆವಾಣಿ ವಾರ್ತೆ
ಹೊಸಪೇಟೆ ಸೆ17 :  ಕಲ್ಯಾಣ-ಕರ್ನಾಟಕ ನಿಜಾಮರ ಆಳ್ವಿಕೆಯಿಂದ ಸ್ವಾತಂತ್ರ್ಯಗೊಂಡು 75 ವರ್ಷಗಳಾದ ನೆನಪಿನಲ್ಲಿ ಇಂದು ಏರ್ಪಡಿಸಿರುವ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ವಿಜಯನಗರ ನೂತನ ಜಿಲ್ಲೆಯ ಸ್ಥಾಪನೆಗೂ ಅಣಿಯಾದ ಸಂದರ್ಭದಲ್ಲಿ ಆಗುತ್ತೀರುವುದು ಹೆಮ್ಮೆಯಾಗಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಹಾಗೂ ಪರಿಸರ, ಜೀವಶಾಸ್ತ್ರ ಹಾಗೂ ಪ್ರವಾಸೋದ್ಯ ಸಚಿವ ಆನಂದಸಿಂಗ್ ಹೇಳಿದರು.
ಹೊಸಪೇಟೆಯ ತಾಲೂಕು ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ  ಹೈದರಾಬಾದ್ ನಿಜಾಮರ ಆಡಳಿತಕ್ಕೆ ಒಳಪಟ್ಟಿದ್ದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಪ್ರಸ್ತುತ ವಿಜಯನಗರ ಪ್ರದೇಶಗಳು ಸ್ವತಂತ್ರ್ಯವಾಗಲು ಒಂದು ವರ್ಷ ಕಾಲ ಕಾಯಬೇಕಾಯಿತು. ವಿಜಯನಗರ ಜಿಲ್ಲೆ ಉದಯವಾಗಿರುವ ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಆಚರಿಸಲು ಮುಂದಾಗಿರುವುದು ಹರ್ಷದಾಯ ಎಂದರು.ಈ ಭಾಗದ ಅನೇಕರು ಕಲ್ಯಾಣ ಕರ್ನಾಟಕ ವಿಮೋಚನೆಗೆ ತಮ್ಮ ಪ್ರಾಣವನ್ನೇ ಲಕ್ಕಿಸದೇ ಹೋರಾಡಿದರು ಇವರೆನ್ನಲ್ಲಾ ನಾವು ಇಂದು ಸ್ಮರಿಸಬೇಕಾಗಿದೆ.
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ ದೃಷ್ಟಿಯಿಂದ ಸಂವಿಧಾನ ತಿದ್ದುಪಡಿಕಾಯ್ದೆ 371(ಜೆ) ಜಾರಿಗೆ ತರಲಾಗಿದೆ. ಇದು ಈ ಭಾಗದ 40 ವಿಧಾನಸಭಾ ಕ್ಷೇತ್ರಗಳ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಿಗೂ ಸೇರಿದಂತೆ, ಎಲ್ಲಾ ಭಾಗಗಳ ಮೂಲಭೂತ ಸೌಕರ್ಯ, ಆರೋಗ್ಯ, ಸಾಮಾಜಿಕ ರಸ್ತೆ ಸಂಪರ್ಕ, ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರೆ ಮೂಲಭೂತ ಸೌಕರ್ಯಗಳನ್ನು ಒದಗಿಸುವುದಕ್ಕೆ ಸಹಕಾರಿಯಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ರೂ.425.35 ಕೋಟಿ ಅನುದಾನ ಹಂಚಿಕೆಯಾಗಿದ್ದು, ಒಟ್ಟು 1505 ಕಾಮಗಾರಿಗಳನ್ನು ಕೈಗೆತ್ತಿಕೊಂಡು 899 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಇದಕ್ಕೆ ರೂ.178.21 ಕೋಟ ಅನುದಾನ ವೆಚ್ಚ ಮಾಡಲಾಗಿದೆ. ಬಾಕಿ ಉಳಿದ 606 ಕಾಮಗಾರಿಗಳು ಪ್ರಗತಿಯಲ್ಲಿರುತ್ತವೆ. ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿಯಿಂದ ಹೊರತರಲು ಸಹಕಾರಿಯಾಗಲಿದೆ ಎಂದರು ನೂತನ ವಿಜಯನಗರ ಜಿಲ್ಲೆ 371ಜೆ ವ್ಯಾಪ್ತಿಗೆ ಬಾರದು ಎಂಬ ಆತಂಕ ದೂರವಾಗಿದ್ದು ಇದನ್ನು ಸೇರಿಸಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗದ ವ್ಯಾಪ್ತಿಗೆ ಒಳಪಡುವ 6 ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗ ಮೀಸಲಾತಿಗಾಗಿ ಶೇ. 80 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ಭಾಗದ ಜನರಿಗಾಗಿ ಶೇ. 8 ರಷ್ಟು ಮೀಸಲಾತಿಯನ್ನು ಕಲ್ಪಿಸಲಾಗಿದೆ. ಇದರ ಲಾಭವನ್ನು ಪಡೆಯಲು ಇಲ್ಲಿಯವರೆಗೆ ಬಳ್ಳಾರಿ ಜಿಲ್ಲೆಯ ಹರಪ್ಪನಹಳ್ಳಿ, ಹೊಸಪೇಟೆ ಹಾಗೂ ಬಳ್ಳಾರಿ ವಿಭಾಗಗಳ ಒಟ್ಟು 1,41,877 ಅಭ್ಯರ್ಥಿಗಳಿಗೆ 371(ಜೆ) ಪ್ರಮಾಣ ಪತ್ರಗಳನ್ನು ವಿತರಿಸಲಾಗಿದೆ. ಇದರಿಂದಾಗಿ ಶಿಕ್ಷಣದಲ್ಲಿ ಹಾಗೂ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಮೀಸಲಾತಿಯನ್ನು ಪಡೆಯಲು ಅನುಕೂಲವಾಗಿದೆ ಎಂದರು. ನೂತನ ವಿಜಯನಗರ ಜಿಲ್ಲೆಯಲ್ಲಿ ತಮ್ಮ ಅಭಿವೃದ್ಧಿಯ ಆಸೆಯವನ್ನು ತೆರೆದಿಟ್ಟರು.
ಕಾರ್ಯಕ್ರಮದಲ್ಲಿ  ವಿಜಯನಗರ ಜಿಲ್ಲಾ ವಿಶೇಷಾಧಿಕಾರಿ ಅನಿರುದ್ದ ಶ್ರವಣ, ಜಿಲ್ಲಾ ಹೆಚ್ಚುವರಿ ಎಸ್‍ಪಿ ಲಾವಣ್ಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಶೋಕ ಜೀರೆ, ಉಪವಿಭಾಗಾಧಿಕಾರಿ ಸಿದ್ದರಾವೇಶ್ವರ, ತಹಶೀಲ್ದಾರ ಹೆಚ್ ವಿಶ್ವನಾಥ ಪಾಲ್ಗೊಂಡಿದ್ದರು. ಧ್ವಜವಂದನೆ, ಪಥಸಂಚಲನೆ ಧ್ವಜಾರೋಹಣ ಹಾಗೂ ಕೋವಿಡ್ ಲಸಿಕೆ ಜಾಗೃತಿಗೆ ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ಸಿದ್ದಪಡಿಸಿದ ಕಿರುಚಿತ್ರವನ್ನು ಇದೆ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.