
ಸಂಜೆವಾಣಿ ವಾರ್ತೆ
ಹೊಸಪೇಟೆ, ಜು.08: ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಮೂಲ ಮಂತ್ರದೊಂದಿಗೆ ರಾಜ್ಯದ ಸಮಗ್ರ ಅಭಿವೃದ್ಧಿ ಗೆ ಪೂರಕ ವಾದ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಲ್ಯಾಣ ಕರ್ನಾಟಕ ಭಾಗ ಹಾಗೂ ಅ ವ್ಯಾಪ್ತಿಯಡಿ ಬರುವ ವಿಜಯ ನಗರ ಜಿಲ್ಲೆಯ ಅಭಿವೃದ್ಧಿಗೂ ಬಜೆಟ್ ನಲ್ಲಿ ಒತ್ತು ನೀಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಗೆ ಈ ವರ್ಷ ಐದು ಸಾವಿರ ಕೋಟಿ ರೂ. ಮೀಸಲಿಟ್ಟಿರುವುದಾಗಿ ತಿಳಿಸಿದ್ದು ವಿಜಯನಗರ ಜಿಲ್ಲೆಯ ಅಭಿವೃದ್ಧಿ ಗೆ ಹೆಚ್ಚು ಪಾಲು ಪಡೆಯಲಾಗುವುದು ಎಂದು ತಿಳಿಸಿದ್ದಾರೆ. ಸಮರ್ಪಕ ಕುಡಿಯುವ ನೀರು ಪೂರೈಕೆಗೆ ವಿಜಯನಗರ ಸೇರಿ ಹತ್ತು ಜಿಲ್ಲೆಗಳಿಗೆ 770 ಕೋಟಿ ರೂ. ಬಜೆಟ್ ನಲ್ಲಿ ಒದಗಿಸಲಾಗಿದೆ ಇದು ಸ್ವಾಗತಾರ್ಹ ಎಂದು ಹೇಳಿದ್ದಾರೆ.
ಆಕಾಂಕ್ಷಿ ತಾಲೂಕುಗಳ ಅಭಿವೃದ್ಧಿಗೆ 3 ಸಾವಿರ ಕೋಟಿ ರೂ. ಬಜೆಟ್ ನಲ್ಲಿ ಮೀಸಲಿಟ್ಟಿದ್ದು ವಿಜಯನಗರ ಜಿಲ್ಲೆಗೂ ಅನುದಾನ ದೊರೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆ ಗಳಲ್ಲಿ ಸಮುದಾಯ ಶೌಚಾಲಯ ಸಂಕೀರ್ಣ ತಲಾ 25 ಲಕ್ಷ ರೂ. ವೆಚ್ಚ ದಲ್ಲಿ ನಿರ್ಮಿಸುವುದಾಗಿ ತಿಳಿಸಲಾಗಿದೆ. ಇದರಡಿ ವಿಜಯನಗರಕ್ಕೂ ನೆರವು ದೊರೆಯಲಿದೆ ಎಂದು ಹೇಳಿದ್ದಾರೆ.
ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚಾಗಿರುವುದರಿಂದ ನವಲೆ ಬಳಿ ಸಮತೋಲನ ಜಲಾಶಯ ಅನುಷ್ಠಾನ ಪ್ರಸ್ತಾಪ ಬಜೆಟ್ ನಲ್ಲಿ ಮಾಡಿದ್ದಾರೆ. ಹಂಪಿ ಸೇರಿ ಕಲ್ಯಾಣ ಕರ್ನಾಟಕ ಭಾಗದ ಪ್ರವಾಸಿ ತಾಣಗಳ ಅಭಿವೃದ್ಧಿ ಗೆ 75 ಕೋಟಿ ರೂ. ಮೀಸಲಿಟ್ಟಿದ್ದಾರೆ. ಹಂಪಿಯಲ್ಲಿ ಧ್ವನಿ ಬೆಳಕು ಪ್ರದರ್ಶನ ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದಕ್ಕಾಗಿ ಮುಖ್ಯಮಂತ್ರಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದ್ದಾರೆ.
ಶಾಲಾ ಕೊಠಡಿ ದುರಸ್ತಿ ಗೆ 100 ಕೋಟಿ ರೂ. ಮೀಸಲಿಟ್ಟಿದ್ದು ವಿಜಯನಗರಕ್ಕೆ ಹೆಚ್ಚು ಅನುದಾನ ಪಡೆಯಲಾಗುವುದು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಜನಪರ ಬಜೆಟ್ ಜನರ ಬದುಕಿನಲ್ಲಿ ಆಶಾಭಾವ ಮೂಡಿಸಿದೆ. ಈ ನಿಟ್ಟಿನಲ್ಲಿ ಐದು ಗ್ಯಾರೆಂಟಿಗಳ ಜಾರಿಗೆ ಒತ್ತು ನೀಡಿದ್ದು, ನುಡಿದಂತೆ ನಡೆಯುವ ಸರ್ಕಾರ ಎಂಬ ಸಂದೇಶ ಸಾರಿದ್ದಾರೆ. ಉಚಿತ ಕೊಡುಗೆಗಳ ಜತೆಗೆ ಕಲ್ಯಾಣ ಕರ್ನಾಟಕಕ್ಕೆ ಹೆಚ್ಚಿನ ಆಧ್ಯತೆ ನೀಡಿದ್ದಾರೆ. ಅದರಿಂದ ವಿಜಯನಗರ ಜಿಲ್ಲೆಗೂ ಹೆಚ್ಚಿನ ಲಾಭವಾಗಲಿದೆ.
ಎಚ್.ಆರ್.ಗವಿಯಪ್ಪ, ವಿಜಯನಗರ ಶಾಸಕ.
ಇದೊಂದು ಕಾಂಗ್ರೆಸ್ ಸರ್ಕಾರದ ಪಂಚ ಗ್ರಾರಂಟಿಗಳ ಅನುಷ್ಠಾನದ ಬಜೆಟ್ ಆಗಿದೆ. ನೂತನ ವಿಜಯನಗರ ಜಿಲ್ಲೆಗೆ ಬಗ್ಗೆ ಇದ್ದಾ ಬಹಳಷ್ಟು ನಿರೀಕ್ಷೆಗಳು ಹುಸಿಯಾಗಿವೆ. ಹಂಪಿ ಅಭಿವೃದ್ಧಿ, ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಧ್ವನಿ ಮತ್ತು ಬೆಳಕು ಯೋಜನೆಯ ಹೊರತಾಗಿ ಮಹತ್ವದ ಘೋಷಣೆಗಳಿಲ್ಲ.
ಅಶ್ವಿನ್ ಕೋತಂಬರಿ,
ವಿಜಯನಗರ ಜಿಲ್ಲಾ ವಾಣಿಜ್ಯ ಹಾಗೂ ಕೈಗಾರಿಕೋದ್ಯಮ ಸಂಘದ ಅಧ್ಯಕ್ಷ.